ದಾವಣಗೆರೆ: ಬಿರುಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು-ನಷ್ಟ ಆಗಿದ್ದು ಎಷ್ಟು ಲಕ್ಷ ಗುತ್ತಾ?
ದಾವಣಗೆರೆ, ಮೇ, 14: ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಮಳೆ, ಗಾಳಿಗೆ ಬೆಳೆ ತೋಟಗಳು ಹಾನಿಗೀಡಾಗಿದ್ದು, ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಮವಾರ (ಮೇ 14) ರಾತ್ರಿ ಮಳೆ, ಗಾಳಿಗೆ ತಾಲೂಕಿನ ಅಣಬೇರು ಗ್ರಾಮದ ರೈತರ ಅಡಿಕೆ ತೋಟಗಳಲ್ಲಿ ಫಲಕ್ಕೆ ಬಂದ ಸುಮಾರು 150ರಿಂದ 200 ಅಡಿಕೆ ಮರಗಳು ಧರೆಗುರುಳಿವೆ. ಮಳೆ, ಗಾಳಿಗೆ ಮಳೆ, ಗಾಳಿಗೆ ಅಡಿಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಸರ್ಕಾರದಿಂದ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದ್ದಾರೆ.

ಕ್ಷೇತ್ರದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಈ ಬಾರಿ ಬರಗಾಲ ಎದುರಾಗಿ ರೈತರು ಕಂಗಾಲಾಗಿದ್ದರೂ ಕೆಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಮೆ ಪಾವತಿಸಿದರೆ, ಇನ್ನು ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಿಮೆ ಪಾವತಿಸಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಯಾಗಿರುವ ರೈತರು ಬೆಳೆ ವಿಮೆ ಕಟ್ಟಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ಬೆಳೆ ವಿಮೆ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು, ತೋಟಗಳಿಗೆ ಭೇಟಿ ನೀಡಿ ಮಳೆ, ಗಾಳಿಗೆ ಹಾನಿಯಾಗಿರುವ ಬೆಳೆ ವರದಿ ತಯಾರಿಸಿ ಸರ್ಕಾರ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕಿಸಿ ಸೂಚನೆ ನೀಡಿದರು. ಬಳಿಕ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು. ಇನ್ನು ಶಾಲೆಯ ಕೊಠಡಿಗಳಲ್ಲಿ ಶಿಥಿಲಗೊಂಡು ಮೇಲ್ಚಾವಣಿ ಕಿತ್ತುಕೊಂಡಿವೆ. ಇದರಿಂದ ಮಳೆ ಬಂದಾಗ ಸೋರುತ್ತಿವೆ ಎಂದು ಗ್ರಾಮಸ್ಥರು ಶಾಸಕರಿಗೆ ಸಮಸ್ಯೆಗಳನ್ನು ಹೇಳಿಕೊಂಡರು.
ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲಿಸಿದರು. ಈ ವೇಳೆ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಕಳಪೆ ಆಗಿರುವುದನ್ನು ಕಂಡು ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಸೂಚನೆ ನೀಡಬೇಕು. ಕಳಪೆ ಮಾಡಿರುವ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಣಬೇರು ಗ್ರಾಮ ಪಂಚಾಯತಿ ಅಧ್ಯಕ್ಷ ಬುಡೆನ್ ಸಾಬ್, ಸದಸ್ಯ ಮಹಾರುದ್ರಪ್ಪ, ಜಾಫರ್ ಶರೀಫ್, ಸೇರಿದಂತೆ ರೈತರು, ಗ್ರಾಮಸ್ಥರು ಹಾಜರಿದ್ದರು.
ಒಂದೂವರೆ ಹೆಕ್ಟೇರ್ ಅಡಿಕೆ ಗಿಡಗಳ ನಾಶ: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದು, ರೈತರ ಬದುಕು ಮೂರಾಬಟ್ಟೆಯಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತರಂತೂ ಆಕಾಶದ ಮೇಲೆ ನೋಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಕಂಡು ಕೇಳರಿಯದ ಬರ ತಲೆದೋರಿದ್ದು, ಬೆಳೆಗಳು ಒಣಗುತ್ತಿವೆ. ಮಾತ್ರವಲ್ಲ, ಅಡಿಕೆ, ತೆಂಗು ಸೇರಿದಂತೆ ಬಹುತೇಕ ಬೆಳೆಗಳು ಒಣಗಿ ಹೋಗಿದ್ದು, ಏನೂ ಬೆಳೆ ಬಾರದ ಕಾರಣ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ಕಳೆದಂತೆ ಬೆಳೆಗಳು ಒಣಗುತ್ತಿರುವುದನ್ನು ನೋಡುತ್ತಿರುವ ಕೆಲ ರೈತರು ಜಮೀನುಗಳಿಗೆ ಬರುವುದನ್ನು ಕೈಬಿಟ್ಟಿದ್ದಾರೆ. ಮಳೆ ಬಂದರೂ ಏನೂ ಉಪಯೋಗವಾಗದಂಥ ಸ್ಥಿತಿ ನಿರ್ಮಾಣವಾಗಿದ್ದು, ಹುಯ್ಯೋ ಹುಯ್ಯೋ ಮಳೆರಾಯ ಎಂದು ದಿನವೂ ಪ್ರಾರ್ಥಿಸುವಂತಾಗಿದೆ.
ಅಡಿಕೆ ತೋಟ ನಾಶ: ಮಳೆ ಇಲ್ಲದೆ ಬೆಳೆಗಳಿಗೆ ನೀರು ಒದಗಿಸುವುದು ಕೂಡ ರೈತರಿಗೆ ಕಷ್ಟವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ ವೆಲ್ ಗಳ ಕೊರೆಸಿದ್ದರೂ ನೀರು ಬಾರದ ಹಿನ್ನಲೆಯಲ್ಲಿ ಫಸಲಿಗೆ ಬಂದಿದ್ದ ಒಂದೂವರೆ ಹೆಕ್ಟೇರ್ ಅಡಿಕೆ ತೋಟವನ್ನು ರೈತನೇ ಕಡಿದು ಹಾಕಿದ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸವರಾಜಪ್ಪ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಅಡಿಕೆ ತೋಟವಾಗಿದ್ದು, ಮಳೆ ಇಲ್ಲದ ಹಿನ್ನಲೆ ಫಸಲು ಬಂದ ಸಾವಿರಾರು ಅಡಿಕೆ ಗಿಡಗಳಿಗೆ ನೀರು ಒದಗಿಸಲಾಗದೆ ಪರದಾಡುತ್ತಿದ್ದರು ಎನ್ನಲಾಗಿದೆ. ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಕ್ಕೂ ಹೆಚ್ಚು ಬೋರ್‌ವೆಲ್ ಕೊರೆಸಿದರೂ ಕೂಡ ನೀರು ಬಿದ್ದಿಲ್ಲ.
ಅಲ್ಲದೆ ಇನ್ನೊಂದು ವರ್ಷ ತೋಟ ಉಳಿಸಿದರೆ, ಅಡಿಕೆ ಫಲ ನೀಡುತ್ತಿತ್ತು. ಆದರೆ ಅಂತರ್ಜಲ ಕುಗ್ಗಿದ ಕಾರಣ 10ಕ್ಕೂ ಹೆಚ್ವು ಬೋರ್‌ವೆಲ್‌ಗಳನ್ನು ಕೊರೆಸಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಇದರಿಂದ ಕೊನೆಗೆ ರೋಸಿ ಹೋಗಿದ್ದ ರೈತ ಬಸವರಾಜಪ್ಪ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಅಲ್ಲದೆ ಹೀಗೆ ಬರಗಾಲದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ರೈತನಿಗೆ ಧೈರ್ಯ ತುಂಬಿದ ಶಾಸಕ: ಮಳೆ ಕೊರತೆ, ಬೋರ್ ವೆಲ್‌ನಲ್ಲಿ ನೀರು ಕುಸಿತದಿಂದ ಅಡಿಕೆ ಮರಗಳು ಒಣಗುವುದನ್ನು ಕಂಡು ಬೇಸತ್ತ ಹೊನ್ನಾಯಕನಹಳ್ಳಿ ಗ್ರಾಮದ ರೈತ ಶಾಸ್ತ್ರಿಹಳ್ಳಿ ಬಸವರಾಜಪ್ಪ ಎಂಬುವರು ತಮ್ಮ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಕಡಿದು ಸುಟ್ಟು ಹಾಕಿದ್ದ ವಿಷಯ ತಿಳಿದ ಶಾಸಕ ಕೆ.ಎಸ್ .ಬಸವಂತಪ್ಪ ಭೇಟಿ ನೀಡಿ ರೈತ ಬಸವರಾಜಪ್ಪ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದರು.
ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಹೊಲಕ್ಕೆ ಬಂದು ಪರಿಶೀಲನೆ ಮಾಡಿ ಆದಷ್ಟು ಬೇಗ ಪರಿಹಾರ ನೀಡಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ತಿಪ್ಪೇಶ್ ನಾಯ್ಕ್, ಹೆಚ್.ಎಂ.ಸಿದ್ದಣ್ಣ, ಕಿರಣ್ ಕುಮಾರ್, ಹನುಮಂತಪ್ಪ ನರಕನಹಳ್ಳಿ, ರುದ್ರೇಶಣ್ಣ, ಶಿವಣ್ಣ ಮೈಲಪ್ಪ, ದೇವೇಂದ್ರಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications