ಗಡಿ ವಿವಾದದ ಬಗ್ಗೆ ಚರ್ಚಿಸಲು ಮುಂದಿನ ವಾರ ಸರ್ವಪಕ್ಷ ಸಭೆ: ದಾವಣಗೆರೆಯಲ್ಲಿ ಸಿಎಂ ಸ್ಪಷ್ಟನೆ
ದಾವಣಗೆರೆ, ನವೆಂಬರ್, 26: ಗಡಿ ವಿವಾದದ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ಕಾನೂನು ತಜ್ಞರು ಹಾಗೂ ಎಲ್ಲಾ ಪಕ್ಷಗಳ ಮುಖಂಡರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು. ಮುಂದಿನ ಕಾನೂನು ಹೋರಾಟ, ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಯಾವ ರೀತಿಯಲ್ಲಿ ತಯಾರಾಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಾಣಗೆರೆಯಲ್ಲಿ ತಿಳಿಸಿದರು.
ವಿಧಾನಸಭೆ ಚುನಾವಣೆ: ಹೈಕಮಾಂಡ್ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ ಎಂದ ಬಿಜೆಪಿ ಶಾಸಕ
ನಮ್ಮದು ಕಾನೂನಾತ್ಮಕ ಹೋರಾಟ
ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕರ್ನಾಟಕದ ಯಾವ ಪ್ರದೇಶಗಳು ಬೇರೆ ರಾಜ್ಯಕ್ಕೆ ಸೇರುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಮುಂದುವರೆಯುತ್ತವೆ. ನಾವು ಸಂವಿಧಾನ, ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಿದ್ದೇವೆ. 2004ರಲ್ಲಿ ಮರುವಿಂಗಡಣಾ ಕಾಯ್ದೆಯಡಿ ನೀಡಲಾದ ಹಕ್ಕುಗಳ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರ ಸರ್ಕಾರ ಹೂಡಿರುವ ದಾವೆಯಲ್ಲಿ ಸತ್ಯಾಂಶ ಇಲ್ಲ ಎಂಬ ವಾದವನ್ನು ಪ್ರಬಲವಾಗಿ ಮಂಡಿಸುತ್ತೇವೆ. ವಾದ ಮಂಡಿಸಲು ಹಿರಿಯ ವಕೀಲರು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ನೇಮಿಸಲಾಗಿದೆ. ಹಲವು ವರ್ಷಗಳಿಂದ ಸಾಕಷ್ಟು ಬೇಡಿಕೆಗಳಿವೆ. ಈ ಬಗ್ಗೆಯೂ ಸರ್ಕಾರ ನಿಗಾ ವಹಿಸಿದೆ ಎಂದರು.
ಶರದ್ ಪವಾರ್ ಕನಸು ನನಸ್ಸಾಗಲ್ಲ
ಇನ್ನು ಎಸ್‌ಸಿಪಿ ಮುಖಂಡ ಶರದ್ ಪವಾರ್ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡಿಕೊಂಡು ಬಂದವರಾಗಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಾತಿಗೆ ಮಹತ್ವ ಬೇಡ. ಪವಾರ್ ಅವರು ಹಿರಿಯರಿದ್ದು, ಅವರ ಬಗ್ಗೆ ನಮಗೆ ಗೌರವ ಇದೆ. ಬೆಳಗಾವಿ ನಮಗೆ ಸೇರಿದ್ದು ಎನ್ನುವ ಶರದ್ ಪವಾರ್ ಅವರದ್ದು ಹಳೆಯ ಕನಸಾಗಿದೆ. ಇದುವರೆಗೂ ಆ ಕನಸು ಈಡೇರಿಲ್ಲ, ಮುಂದೆಯೂ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದರು. ಮಹಾರಾಷ್ಟ್ರದ ಜತ್‌ನ 40 ಗ್ರಾಮ ಪಂಚಾಯಿತಿ ಸದಸ್ಯರು ಸಭೆ ನಡೆಸಿ ಕರ್ನಾಟಕಕ್ಕೆ ಸೇರಿಸಬೇಕು ಎಂದು ಒತ್ತಾಯ ಮಾಡುವ ಮನವಿ ಮಾಡಿದ್ದಾರೆ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ದಾವಣಗೆರೆಗೆ ಪದೇ ಪದೇ ಭೇಟಿ ನೀಡುತ್ತಿರುವ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ದಾವಣಗೆರೆ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿದೆ. ಮೊನ್ನೆ ಬಿಜೆಪಿ ಸಂಕಲ್ಪ ಯಾತ್ರೆ ಇತ್ತು ಅದಕ್ಕಾಗಿ ಇಲ್ಲಿಗೆ ಬಂದಿದ್ದೆ. ಇಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರ ಹುಟ್ಟುಹಬ್ಬದ ನಿಮಿತ್ತ ಬಂದಿದ್ದೇನೆ. ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಲು ಇಲ್ಲಿಗೆ ಬರಬೇಕು. ಇದಕ್ಕೆ ವಿಶೇಷ ಅರ್ಥ ಬೇಡ ಎಂದು ಹೇಳಿದರು.