ದಾವಣಗೆರೆ: ಹರಪನಹಳ್ಳಿ ತಾಲ್ಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು: ಆರೋಪ
ದಾವಣಗೆರೆ, ಜೂನ್, 14: ಸಿಸೇರಿಯನ್ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಬಾಣಂತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ದುರ್ಗಮ್ಮ (21) ಎಂಬವವರು ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣವೇ ಹತ್ತಿರದ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿಸಿದ್ದು, ಹರಪನಹಳ್ಳಿ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗು ಜನಿಸಿದ್ದು, ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆರಿಗೆಗಾಗಿ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ಮಗಳನ್ನು ದಾಖಲು ಮಾಡಿದ್ದೆವು. ಸಿಸೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಆದರೆ, ಹೆರಿಗೆ ಬಳಿಕ ಹೊಲಿಗೆ ಹಾಕುವ ವೇಳೆ ವೈದ್ಯರು ಎಡವಟ್ಟು ಮಾಡಿದ್ದಾರೆ. ಬಳಿಕ ನಿಮ್ಮ ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ 12 ಬಾಟಲ್ ರಕ್ತ ಹಾಕಿ ಗರ್ಭಕೋಶ ಹೊರತೆಗೆಯಬೇಕು ಎಂದರು.
ಈ ಎಲ್ಲಾ ಪ್ರಯತ್ನ ಮಾಡಿದರೂ ನಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ರಕ್ತ ಇಲ್ಲ, ರಕ್ತಸ್ರಾವ ಆಗುತ್ತಿದೆ ಎಂದು ಏನೂ ಹೇಳಲಿಲ್ಲ. ನಮಗೆ ನೋಡಲು ಸಹ ಬಿಡಲಿಲ್ಲ. ಹರಪನಹಳ್ಳಿ ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಗಳು ಸಾವನಪ್ಪಿದ್ದಾಳೆ ಎಂದು ಮೃತರ ತಾಯಿ ಹುಲಿಗೆಮ್ಮ ಆರೋಪ ಮಾಡಿದ್ದಾರೆ.
ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿದ್ದು, ಬಾಣಂತಿಗೆ ಸ್ವಚ್ಛಗೊಳಿಸದೆ ಹೊಲಿಗೆ ಹಾಕಿದ್ದಾರೆ. ಅಲ್ಲದೆ, ಎರಡು ಹೊಲಿಗೆ ಬಿಡುವಷ್ಟು ಜಾಗವನ್ನು ಬಿಟ್ಟಿದ್ದಾರಂತೆ. ಇದರಿಂದಲೇ ದುರ್ಗಮ್ಮನ ಗರ್ಭಕೋಶದಿಂದ ತೀವ್ರ ರಕ್ತಸ್ರಾವ ಆಗಿದ್ದು, ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಈ ವೇಳೆ ಆಕೆಯ ಪತಿ ನಾರಾಯಣ್ ವೈದ್ಯರು ಮತ್ತು ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಆಗ ಯಾರೂ ಸ್ಪಂದಿಸಿಲ್ಲ ಎಂದರು.
ಇನ್ನು ಮಾರನೇ ದಿನ ದುರ್ಗಮ್ಮಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಎಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ಆಹ ತಕ್ಷಣವೇ ಚಿಗಟೇರಿ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆ ಕೊಟ್ಟಿದ್ದಾರೆ. ಆದರೂ ಅವರು ಬದುಕುಳಿಯಲಿಲ್ಲ ಎಂದು ಹರಪನಹಳ್ಳಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದ, ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು. ಜೊತೆಗೆ ಹಸುಗೂಸಿಗೆ ಸಮರ್ಪಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.












Click it and Unblock the Notifications