2ಎ ಮೀಸಲಾತಿಗೆ ಒತ್ತಾಯಿಸಿ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ: ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ, ನವೆಂಬರ್ 07: ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಬೇಕು ಹಾಗೂ 2 ಎ ಮೀಸಲಾತಿ ಅನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ನೀಡಬೇಕೆಂಬ ಬೇಡಿಕೆ ಇಟ್ಟುಕೊಂಡು ಮತ್ತೆ ಹೋರಾಟ ಆರಂಭಿಸಲಾಗಿದೆ.
ಈ ಬಗ್ಗೆ ತಿಳಿಸಿರುವ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನವೆಂಬರ್ 10ಕ್ಕೆ ದಾವಣಗೆರೆಯ ಹೊರವಲಯದ ಚಿಂದೋಡಿ ಲೀಲಾ ಸಮುದಾಯದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನಗೊಳಿಸಲೇಬೇಕು. ಲಿಂಗಾಯತ ಉಪಸಮಾಜಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ನಿರ್ಧರಿಸಬೇಕು. ಈ ಎರಡೂ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಈ ಹೋರಾಟದಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ್, ವಿನಯ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪಸಮಾಜಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ನ. 10ರೊಳಗೆ ತೀರ್ಮಾನ ಪ್ರಕಟಿಸಿ ಸಮಾಜದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೇ ಕಾರ್ಯನಿರತವರಾಗಿದೆ. ಮೀಸಲಾತಿ ವಿಚಾರದಲ್ಲಿ ಗಮನಹರಿಸುವುದಿಲ್ಲ ಎಂದು ಭಾವಿಸಿದ್ದೆೇವೆ. ಆದರೆ, ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹಾಗೂ ಒಕ್ಕಲಿಗರ ಮೀಸಲಾತಿ ನೀಡುವ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಲಿಂಗಾಯತ ಉಪಸಮಾಜಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡದೇ ಸರ್ಕಾರ ತಾರತಮ್ಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ. 10ರ ಹೋರಾಟದ ಸ್ಥಳದಲ್ಲಿಯೇ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಯಾವ ರೀತಿ ಹೋರಾಟ ಮಾಡಬಹುದು ಎಂಬ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಂಚಮಸಾಲಿ ಸಮಾಜದವರಿಗೆ ಮೀಸಲಾತಿ ಕೊಡುವ ವಿಚಾರದಲ್ಲಿ ತೋರಿದ ಉದಾಸೀನತೆಯಿಂದಾಗಿಯೇ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುವಂತಾಯಿತು. ಈಗಿನ ಕಾಂಗ್ರೆಸ್ವೂ ನಮ್ಮ ಸಮಾಜದ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಅದು ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ನ. 10ರ ಹೋರಾಟದ ಪೂರ್ವ ರಾಜ್ಯ ಸರ್ಕಾರ ಕನಿಷ್ಟ ಪಕ್ಷ ಕೇಂದ್ರಕ್ಕೆ ಲಿಂಗಾಯತ ಓಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದ ಬೃಹತ್ ಪಾದಯಾತ್ರೆ ಹಾಗೂ ಇತರ ಹೋರಾಟಕ್ಕೆ ಮಣಿದ ಹಿಂದಿನ ಸರ್ಕಾರ ಕೊನೆಯ ಘಳಿಗೆಯಲ್ಲಿ ನಮ್ಮ ಸಮಾಜವನ್ನು 2ಡಿ ಮೀಸಲಾತಿ ಕೊಟ್ಟಿತು. ಆದರೆ, ಚುನಾವಣೆ ಬಳಿಕ ಬೇರೆ ಪಕ್ಷದ ಸರ್ಕಾರ ಬಂದು ಅದು ಅನುಷ್ಠಾನವಾಗಿಲ್ಲ. ಈಗಿನ ಹೊಸ ಸರ್ಕಾರಕ್ಕೆ ಮೀಸಲಾತಿ ಬಗ್ಗೆ ಮನವಿ ಮಾಡಲಾಗಿತ್ತು. ಆಗ ಮುಖ್ಯಮಂತ್ರಿಯವರು ಬಜೆಟ್ ಅಧಿವೇಶನದ ಬಳಿಕ ಕ್ರಮವಹಿಸುವ ಭರವಸೆ ನೀಡಿದ್ದರು. ಬಜೆಟ್ ಅಧಿವೇಶನ ಮುಗಿದು ನಾಲ್ಕು ತಿಂಗಳಾದರೂ ಈ ಬಗ್ಗೆ ಕ್ರಮವಹಿಸಿಲ್ಲ. ಸಮಾಜಕ್ಕೆ ಮೀಸಲಾತಿ ಜಾರಿ ಆಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ನ. 10ರಂದು ನಗರದಲ್ಲಿ ನಡೆಯುವ ಹೋರಾಟದಲ್ಲಿ ಐದು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದು ಸಮಾಜದ ಹೋರಾಟದ ಕಾರ್ಯಕ್ರಮವಾಗಿದ್ದು ವಿಷಯ ತಿಳಿದು ಎಲ್ಲರೂ ಭಾಗವಹಿಸಬೇಕಾದ ಸಂದರ್ಭ ಇದಾಗಿದೆ. ಆದ್ದರಿಂದ ಸಮಾಜದ ಸ್ವಾಮೀಜಿ ಇರಲಿ, ಸಾಮಾನ್ಯರೇ ಇರಲಿ ಯಾರಿಗೂ ಪ್ರತ್ಯೇಕ ಆಹ್ವಾನ ನೀಡುವುದಿಲ್ಲ ಎಂದರು.
ಪಂಚಮಸಾಲಿ ಸಮಾಜದ ಪ್ರಮುಖರಾದ ಅಶೋಕ ಗೋಪನಾಳ, ಬಿ.ಜೆ. ಅಜಯಕುಮಾರ್, ಬಕ್ಕೇಶ್, ಓಂಕಾರಪ್ಪ, ಈಶ್ವರಪ್ಪ, ಮಾಲತೇಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು.












Click it and Unblock the Notifications