Dr. MC Sudhakar Profile: ಚಿಂತಾಮಣಿಯಲ್ಲಿ ಡಾ ಎಂಸಿ ಸುಧಾಕರ್ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸ್ತಾರಾ?
ಡಾ ಎಂಸಿ ಸುಧಾಕರ್.. ವೃತ್ತಿಯಲ್ಲಿ ವೈದ್ಯರಾಗಿರುವ ಇವರು ಪ್ರವೃತ್ತಿಯಲ್ಲಿ ರಾಜಕಾರಣಿ, ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ನಾಯಕ. ಮೂರು ಬಾರಿ ಶಾಸಕ, ಎರಡು ಬಾರಿ ಪರಿಷತ್ ಸದಸ್ಯರಾಗಿದ್ದ ಎಂಸಿ ಆಂಜನೇಯ ರೆಡ್ಡಿ ಅವರ ಮೊಮ್ಮಗನಾಗಿರುವ ಇವರು, 5 ಬಾರಿ ಶಾಸಕರಾಗಿದ್ದ ಎಂಸಿ ಚೌಡರೆಡ್ಡಿ ಅವರ ಪುತ್ರನಾಗಿದ್ದು, ತಮ್ಮ ಕುಟುಂಬದ ರಾಜಕಾರಣದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪಕ್ಷಕ್ಕಿಂತ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಎರಡು ಬಾರಿ ಶಾಸಕರಾಗಿದ್ದು, ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಎಂ.ಸಿ. ಸುಧಾಕರ್ ಅವರು 1994ರಲ್ಲಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ದಂತ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಎಂಡಿಎಸ್ ಕೂಡ ಮಾಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಮಾರುತಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಪೆಸರ್ ಆಗಿ ಸೇವೆ ಸಲ್ಲಿಸಿದ್ದರು. ಎಂಸಿ ಸುಧಾಕರ್ ಅವರು ಕರ್ನಾಟಕ ಚಾಪ್ಟರ್ ಆಫ್ ಭಾರತೀಯ ದಂತ ವೈದ್ಯಕೀಯ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದು, ಜನರ ಜೊತೆ ಸಂಪರ್ಕದಲ್ಲಿದ್ದಾರೆ.

ಡಾ ಎಂಸಿ ಸುಧಾಕರ್ ರಾಜಕೀಯ ಹಿನ್ನೆಲೆ!
1999ರಲ್ಲಿ ಚಿಂತಾಮಣಿಯಲ್ಲಿ ತಂದೆ ಚೌಡರೆಡ್ಡಿ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಡಾ ಎಂಸಿ ಸುಧಾಕರ್ ಅವರು ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ. 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಸುಧಾಕರ್ ಅವರು ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದರು.
ಆದರೆ, 2013ರಲ್ಲಿ ಡಾ ಎಂಸಿ ಸುಧಾಕರ್‌ಗೆ ಕಾಂಗ್ರೆಟ್ ಟಿಕೆಟ್ ನಿರಾಕರಿಸಲಾಯಿತು. ಈ ಹಿನ್ನೆಲೆ ಕಾಂಗ್ರೆಸ್ ತೊರೆದ ಸುಧಾಕರ್ 2013ರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿದರು. ಪಕ್ಷೇತರರಾಗಿ ಸ್ಪರ್ಧಿಸಿದರು ಕೂಡ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸುಧಾಕರ್‌ಗೆ ಟಿಕೆಟ್ ನೀಡದೇ ಬೇರೆಯವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತ್ತು. 2016ರ ಫೆಬ್ರವರಿಯಲ್ಲಿ ಎಂಸಿ ಸುಧಾಕರ್ ವಾಪಸ್ ಕಾಂಗ್ರೆಸ್‌ಗೆ ಸೇರಿದರು. ಆದರೆ, 2018ರಲ್ಲಿ ಮತ್ತೆ ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು, ಭಾರತೀಯ ಪ್ರಜಾ ಪಕ್ಷದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಕಳೆದ ಎರಡು ಚುನಾವಣೆಯಲ್ಲಿ ಪಕ್ಷೇತರರಾಗಿ ಸುಧಾಕರ್ ಸ್ಪರ್ಧಿಸಿದ್ದಕ್ಕೆ ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅನುಕೂಲ ಆಗಿದ್ದು, ಕಾಂಗ್ರೆಸ್‌ಗೆ ಸೋಲು ಉಂಟಾಯಿತು. ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ಅವರ ವಿರೋಧಿ ಬಣದಲ್ಲಿ ಸುಧಾಕರ್ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರಿಂದಲೇ ಎರಡು ಬಾರಿ ಸುಧಾಕರ್‌ಗೆ ಟಿಕೆಟ್ ತಪ್ಪಿದೆ ಎನ್ನಲಾಗಿತ್ತು.
ಕೆಎಚ್ ಮುನಿಯಪ್ಪ ವಿರೋಧದ ನಡುವೆಯೂ 2022ರ ಜೂನ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಡಾ ಎಂಸಿ ಸುಧಾಕರ್ ಸೇರಿದ್ದಾರೆ. ಈ ಬಾರಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಸುಧಾಕರ್, ಚುನಾವಣೆಗೆ ಜೋರಾಗಿಯೇ ತಯಾರಿ ನಡೆಸಿದ್ದಾರೆ.












Click it and Unblock the Notifications