ಚಿತ್ರದುರ್ಗ : ಪ್ರಸಾದದಲ್ಲಿ ವಿಷಹಾಕಿ ಅಕ್ಕನನ್ನು ಕೊಂದ ಅರ್ಚಕ
ಚಿತ್ರದುರ್ಗ, ಆಗಸ್ಟ್ 24 : ಪ್ರಸಾದದಲ್ಲಿ ವಿಷ ಬೆರೆಸಿ ಅಕ್ಕನನ್ನು ಕೊಂದ ಆರೋಪದ ಮೇಲೆ ಶನಿದೇವರ ದೇವಾಲಯದ ಅರ್ಚಕ ಮಂಜುನಾಥ್‌ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ದೇವರ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾದವರ ಪೈಕಿ ಒಬ್ಬರು ಸಾವನ್ನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದುರ್ಗ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಸಿದ್ಧಮ್ಮ (50) ಮೃತಪಟ್ಟಿದ್ದು, ಸಿದ್ಧಮ್ಮ ಪತಿ ವೀರಭದ್ರ (60), ಮಗ ರಾಘವೇಂದ್ರ (35) ಹಾಗೂ ಮೊಮ್ಮಗ ಆನಂದ್ (10) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಚಕ ಮಂಜುನಾಥ್ ತನ್ನ ಅಕ್ಕ ಮತ್ತು ಆಕೆಯ ಕುಟುಂಬದವರಿಗೆ ಪ್ರಸಾದದಲ್ಲಿ ವಿಷ ಬೆರೆಸಿ ಕೊಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದೆ. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

ಘಟನೆಯ ವಿವರ : ಭಾನುವಾರ ಸಿದ್ಧಮ್ಮ ಪತಿ, ಮಗ ಮತ್ತು ಮೊಮ್ಮಗನೊಂದಿಗೆ ಅಕ್ಕಿತಿಮ್ಮನಹಳ್ಳಿಯಲ್ಲಿರುವ ಶನಿದೇವರ ದೇವಸ್ಥಾನಕ್ಕೆ ಹೋಗಿದ್ದರು. ಸಿದ್ಧಮ್ಮ ತಮ್ಮ ಮಂಜುನಾಥ್ ಈ ದೇವಾಲಯದ ಅರ್ಚಕ. ದೇವರ ದರ್ಶನ ಮುಗಿಸಿ ಬರುವಾಗ ಮಂಜುನಾಥ್ ಪ್ರಸಾದ ನೀಡಿದ್ದರು. ಎಲ್ಲರೂ ಪ್ರಸಾದ ತಿಂದು ಮನೆಗೆ ವಾಪಸ್ ಆಗಿದ್ದರು. [ಮಾಗಡಿ ರಂಗನಾಥ ದೇವಾಲಯದ ಅಚ್ಚರಿ ನೋಡಿ]
ಹೊನ್ನೇನಹಳ್ಳಿಗೆ ಆಗಮಿಸಿದ ಕೆಲವು ಸಮಯದಲ್ಲಿಯೇ ಎಲ್ಲರಿಗೂ ವಾಂತಿ ಆರಂಭವಾಗಿತ್ತು. ತಕ್ಷಣ ನಾಲ್ವರನ್ನು ಹೊಸದುರ್ಗದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಿದ್ಧಮ್ಮ ಮೃತಪಟ್ಟಿದ್ದರು.
ವಿಷ ಬೆರಸಿದ ಪ್ರಸಾದ : ದೇವಸ್ಥಾನಕ್ಕೆ ಹಲವಾರು ಜನರು ಬಂದು ಹೋಗಿದ್ದರು. ಆದರೆ, ಯಾರಿಗೂ ಹೀಗೆ ಆಗಿರಲಿಲ್ಲ. ಸಿದ್ಧಮ್ಮ ಮತ್ತು ಮಂಜುನಾಥ್ ನಡುವೆ ಕಿರಾಣಿ ಅಂಗಡಿ ವಿಷಯಕ್ಕೆ ಜಗಳ ನಡೆದಿತ್ತು. ಆದ್ದರಿಂದ ಪ್ರಸಾದದಲ್ಲಿ ವಿಷಬೆರೆಸಿ ಆತ ತಿನ್ನಲು ನೀಡಿದ್ದ.
ಸಿದ್ಧಮ್ಮ ಕುಟುಂಬದವರು ಮಂಜುನಾಥ್ ಮತ್ತು ಆತನ ಪುತ್ರ ಉಮೇಶ್ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರದಿಂದ ನಾಪತ್ತೆಯಾಗಿದ್ದ ಮಂಜುನಾಥ್‌ನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.












Click it and Unblock the Notifications