ಹರಿಹರದಿಂದ ಭರಮಸಾಗರ ಕೆರೆಗೆ ಹರಿದು ಬಂದ ತುಂಗಭದ್ರಾ ನೀರು
ಚಿತ್ರದುರ್ಗ, ಸೆಪ್ಟೆಂಬರ್ 30: ಚಿತ್ರದುರ್ಗ ಜಿಲ್ಲೆಯ ಭರಮಸಾಗರ ದೊಡ್ಡಕೆರೆಗೆ ಪ್ರಾಯೋಗಿಕವಾಗಿ ಬುಧವಾರ ತುಂಗಭದ್ರಾ ನೀರು ಹರಿದು ಬಂದಿದ್ದು, ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಮತ್ತೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
ದಾವಣಗೆರೆ ಜಿಲ್ಲೆ ಹರಿಹರದ ತುಂಗಭದ್ರಾ ನದಿಯಿಂದ 56 ಕಿಲೋಮೀಟರ್ ದೂರದ ಭರಮಸಾಗರ ದೊಡ್ಡಕೆರೆಗೆ ನೀರು ಹಾಯಿಸುವ 562 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ಬುಧವಾರ ಮಧ್ಯಾಹ್ನ ಸ್ಥಳೀಯ ಮುಖಂಡರು ಪೂಜೆ ಸಲ್ಲಿಸಿ ನೀರು ಬರುವುದನ್ನು ಕಾದು ನೋಡುತ್ತಿದ್ದರು.
ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನಿರಂತರ ಕಾಳಜಿಯಿಂದಾಗಿ ಭರಮಸಾಗರದ ಐತಿಹಾಸಿಕ ಕೆರೆಗೆ ನೀರು ಹರಿದು ಬಂದಿದ್ದು, ಶ್ರೀಗಳು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.

ಸೆಪ್ಟಂಬರ್ 24ರಂದು ಕೆರೆಗೆ ಪ್ರಯೋಗಿಕವಾಗಿ ನೀರು ಹರಿಸುವುದನ್ನು ಸಿರಿಗೆರೆ ಶ್ರೀಗಳು ವೀಕ್ಷಿಸುವ ನಿರೀಕ್ಷೆಯಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಸುಮಾರು ಒಂದು ಸಾವಿರ ಎಕರೆ ವಿಸ್ತೀರ್ಣವಿರುವ ದೊಡ್ಡಕೆರೆ ಸೇರಿದಂತೆ ಭರಮಸಾಗರ ಹೋಬಳಿಯ 42 ಕೆರೆಗಳಿಗೆ ಹರಿಹರದ ತುಂಗಭದ್ರಾ ನದಿಯಿಂದ ಮೂಲಕ ನೀರನ್ನು ಮೇಲೆತ್ತಿ ಕೆರೆಗೆ ನೀರು ತುಂಬಿಸುವ ಯೋಜನೆಗೆ 2009ರಲ್ಲಿ ಶಂಕರನಾರಾಯಣ ಕನ್ಸ್ಟ್ರಕ್ಷನ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಈ ಕಾಮಗಾರಿ ಮುಗಿಸಲು ಎರಡು ವರ್ಷದೊಳಗೆ ಕಾಮಗಾರಿ ಮುಗಿಸಲು ನಿಗದಿಯಾಗಿತ್ತು. ಇದೀಗ ಪ್ರಯೋಗಾರ್ಥವಾಗಿ ಎರಡು ಮೋಟಾರ್‌ಗಳಿಗೆ ಚಾಲನೆ ನೀಡಲಾಗಿದೆ. ಪ್ರತಿ ನಿಮಿಷಕ್ಕೆ 2,790 ಲೀಟರ್ ನೀರು ಕೆರೆಗೆ ಬರುವ ನಿರೀಕ್ಷೆಯಿದ್ದು, ಒಂದು ಸಾವಿರ ಎಕರೆ ವಿಸ್ತೀರ್ಣವಿರುವ ಈ ದೊಡ್ಡಕೆರೆ ತುಂಬಲು 21 ದಿನಗಳು ಬೇಕಾಗುತ್ತದೆ ಎನ್ನಬಹುದು.

ಭರಮಸಾಗರ ಏತ ನೀರಾವರಿ
ಹರಿಹರ ತಾಲೂಕು ಹಲಸಬಾಳು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಭರಮಸಾಗರದ ಐತಿಹಾಸಿಕ ಕೆರೆಗೆ 55 ಕಿಲೋಮೀಟರ್ ದೂರ ಇದೆ. ಇದು ಬಹುತೇಕ ರಾಜ್ಯದಲ್ಲಿಯೇ ಬಹುದೊಡ್ಡ ರೈಸಿಂಗ್ ಮೇಲಿರುವ ಯೋಜನೆಯಾಗಿದ್ದು, ತುಂಗಭದ್ರಾ ನದಿಯಿಂದ ಪಂಪ್ ಮಾಡುವ ನೀರು ನೇರವಾಗಿ ಇಲ್ಲಿಂದ ಮುಂದೆ ಚಳ್ಳಕೆರೆ, ಬೇವಿನಹಳ್ಳಿ, ನಂದಿಹಳ್ಳಿ, ಇಸಾಮುದ್ರ, ಚಿಕ್ಕಬೆನ್ನೂರು, ಚಿಕ್ಕಪುರ ಹೀಗೆ ಆರು ಕವಲು ದಾರಿಗಳಲ್ಲಿ ಹಾಯುವ ಮೂಲಕ ಅಲ್ಲಿನ ಕೆರೆಗಳನ್ನು ತುಂಬಿಸುತ್ತದೆ.
ಭರಮಸಾಗರ ಕೆರೆಗೆ ನೀರು ಹರಿಸುವ ವಿಚಾರ ಕೇಳಿ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದು, "ನಮ್ಮ ಸಂಕಲ್ಪದಂತೆ ದಶಕಗಳಿಂದ ರೈತರಿಗೆ ಉಂಟಾಗಿದ್ದ ನೀರಿನ ಅಭಾವ ಈಗ ಬಗೆಹರಿದಿದ್ದು, ರೈತರ ಮೊಗದಲ್ಲಿ ಶಾಶ್ವತವಾಗಿ ಮಂದಹಾಸ ಮೂಡಿಸಿದೆ. ಇದು ಶಾಶ್ವತ ಪರಿಹಾರದ ಯೋಜನೆಯಾಗಿದೆ,'' ಎಂದು ಶ್ರೀಗಳು ತಿಳಿಸಿದರು.

ಇನ್ನು ಭರಮಸಾಗರ ಕೆರೆಗೆ ನೀರು ಹರಿಸುವ ವಿಚಾರ ತಿಳಿಯುತ್ತಿದ್ದಂತೆ ನೂರಾರು ರೈತರು, ಜನಪ್ರತಿನಿಧಿಗಳು, ಸಾರ್ವಜನಿಕರು ಕೆರೆಯಲ್ಲಿ ನೀರು ಉಕ್ಕುವ ತುಂಗಭದ್ರೆ ನೋಡಲು ಜನಸಾಗರ ಜಮಾಯಿಸಿದ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಬೈಕ್, ಕಾರುಗಳ ಮೂಲಕ ಹೋಬಳಿಯ ಸುತ್ತಮುತ್ತಲಿನ ಜನರು ಆಗಮಿಸಿದ್ದರು. ನೆರೆದಿದ್ದ ಜನರು ಮೊಬೈಲ್ ಮೂಲಕ ನೀರು ಬರುವುದನ್ನು ಸೆರೆ ಹಿಡಿದುಕೊಳ್ಳುತ್ತಿದ್ದರು. ಇನ್ನೂ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.












Click it and Unblock the Notifications