ಕೇಕ್ ಕತ್ತರಿಸಿ ಕುರಿ ಹುಟ್ಟುಹಬ್ಬ ಆಚರಿಸಿದ ರೈತ: ಗಿಫ್ಟ್ ನೀಡಿ ಸಂಭ್ರಮಿಸಿದ ಗ್ರಾಮಸ್ಥರು
ಚಿತ್ರದುರ್ಗ, ಮೇ 03ಸ: ಸಾಮಾನ್ಯವಾಗಿ ಮನುಷ್ಯರು ಜನ್ಮ ದಿನಾಚರಣೆ ಮಾಡಿಕೊಳ್ಳುತ್ತಾರೆ. ಬರ್ತಡೇ, ಮದುವೆ, ಇನ್ನಿತರ ಸಂತೋಷ ಕ್ಷಣಗಳನ್ನು ಕಳೆಯಲು ಕೇಕ್ ಕತ್ತರಿಸುವುದು ರೂಡಿಯಲ್ಲಿದೆ. ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆಚರಣೆಗಳು ಹುಟ್ಟಿಕೊಂಡಂತೆ, ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸೀಮಂತ, ಹುಟ್ಟು ಹಬ್ಬ ಆಚರಣೆಗಳು ನಡೆಯುತ್ತಿದೆ. ಇದೇ ರೀತಿ ಕುರಿಗೆ ಹುಟ್ಟು ಹಬ್ಬ ಆಚರಿಸುರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕಿಟ್ಟಪ್ಪ ಎಂಬ ಕುರಿ ಮಾಲೀಕ, ಕುರಿಗೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಎರಡನೇ ವರ್ಷದ ಕುರಿಗೆ ಹುಟ್ಟು ಹಬ್ಬ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಿಟ್ಟಪ್ಪ ಪ್ರೀತಿಯಿಂದ ಒಂದು ಕುರಿಮರಿ ಸಾಕಿದ್ದರು. ಕುರಿ ದೊಡ್ಡದಾದ ಬಳಿಕ ಒಂದು ಹೆಣ್ಣು ಕುರಿ ಮರಿಗೆ ಜನ್ಮ ನೀಡಿದೆ. ಕಾರಣಾಂತರಗಳಿಂದ ಜನ್ಮ ನೀಡಿದ ಕುರಿ ಸಾವನ್ನಪ್ಪಿದೆ. ಅನಾಥವಾಗಿದ್ದ ಸಣ್ಣ ಕುರಿ ಮರಿಯ ಜೊತೆಗೆ ಇನ್ನೊಂದು ಕುರಿ ಮರಿ ತಂದು ಎರಡು ಮರಿಗಳನ್ನು ಸಾಕಿದ್ದಾರೆ. ಆದರೆ ತಬ್ಬಲಿಯಾಗಿದ್ದ ಕುರಿ ಮರಿ ದೊಡ್ಡದಾಗಿ ಬೆಳೆದು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮೊದಲನೇ ವರ್ಷದಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಮೂರು ಕೆಜಿ ಕೇಕ್ ಹಾಗೂ ಕಾರ ತಂದು ಜನ್ಮದಿನಾಚರಣೆ ಕಾರ್ಯಕ್ರಮ ಮಾಡಿದ್ದಾರೆ.
ಇಷ್ಟೆ ಅಲ್ಲದೇ ಕುರಿ ಮಾಲೀಕ ಗ್ರಾಮದ ಅಕ್ಕಪಕ್ಕದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಕುರಿ ಮಾಲೀಕನ ಕರೆಗೆ ಓಗೊಟ್ಟು ಸ್ನೇಹಿತರು, ಗ್ರಾಮಸ್ಥರು ಬರ್ತಡೇ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಯ ಕೋರಿ, ಗಿಫ್ಟ್ ರೂಪದಲ್ಲಿ 100, 200 ರೂಪಾಯಿ ಹಣವನ್ನು ನೀಡಿರುವುದು ವಿಶೇಷವಾಗಿದೆ.

ಕುರಿಯ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕೇಕ್ ಹಾಗೂ ಕಾರ ವಿತರಿಸಲಾಗಿದೆ.
ಈ ಕುರಿತು ಮಾತನಾಡಿದ ಕುರಿ ಮಾಲೀಕ ಕಿಟ್ಟಪ್ಪ "ನಾನು ಎರಡು ವರ್ಷದ ಹಿಂದೆ ಒಂದು ಕುರಿಯೊಂದನ್ನು ಸಾಕಿದ್ದೆ. ಅದು ಒಂದು ಮರಿಗೆ ಜನ್ಮ ನೀಡಿ, ಮೃತಪಟ್ಟಿತ್ತು. ತಾಯಿಯನ್ನು ಕಳೆದುಕೊಂಡ ಮರಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದನ್ನು ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ, ಗುಣಪಡಿಸಿಲಾಯಿತು. ನಂತರ ಕುರಿ ಮರಿ ನಮ್ಮೊಂದಿಗೆ ಬೆರೆಯಿತು. ಆಗಾಗಿ ನನಗೆ ತುಂಬಾ ಇಷ್ಟವಾಯಿತು. ಕಳೆದ ಬಾರಿ ಕೂಡ ಮೊದಲ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿದ್ದೆವು. ಮುಂದಿನ ವರ್ಷ ಕೂಡ ಹುಟ್ಟು ಹಬ್ಬ ಆಚರಿಸಲಾಗುತ್ತದೆ. ಕುರಿಯನ್ನು ಯಾರಿಗೂ ಕೊಡುವುದಿಲ್ಲ, ಹಾಗೂ ಕೊಯ್ಯುವುದು ಇಲ್ಲ. ಮನೆಯ ಸದಸ್ಯನಾಗಿ ಇರುತ್ತದೆ. ಕುರಿಯ ಜೀವ ಇರುವವರೆಗೂ ನಾನು ಅದರ ಹುಟ್ಟು ಹಬ್ಬ ಆಚರಣೆ ಮಾಡುತ್ತೇನೆ" ಎಂದು ತಿಳಿಸಿದರು.
ಒಟ್ಟಾರೆಯಾಗಿ ಪ್ರಾಣಿ ಪ್ರಿಯರಾಗಿರುವ ಕುರಿ ಮಾಲಿಕ ಕಿಟ್ಟಪ್ಪ ಅವರು ಕುರಿಗೆ ಹುಟ್ಟು ಹಬ್ಬ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಪ್ರಾಣಿಗಳಿಗೂ ಸಹ ಹುಟ್ಟುಹಬ್ಬ, ಸೀಮಂತ, ನಾಮಕರಣ ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದು ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ವರ್ಷದ ಚಳ್ಳಕೆರೆ ತಾಲೂಕಿನ ಗ್ರಾಮವೊಂದರಲ್ಲಿ ಮೇಕೆಗೆ 9 ತಿಂಗಳು ಪೂರೈಸಿದೆ ಎಂದು ಸೀಮಂತ ಕಾರ್ಯಕ್ರಮ ಕೂಡ ನಡೆದಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು.












Click it and Unblock the Notifications