ನಾಲ್ಕು ವರ್ಷಗಳಿಂದ ನಿರಂತರ ಅನ್ನದಾನ:ಇದು ಹಿರಿಯೂರಿನ ರೋಟರಿ&ರೆಡ್ ಕ್ರಾಸ್ ಸಂಸ್ಥೆಯ ಸಮಾನ ಮನಸ್ಕರ ಸಮಾಜಮುಖಿ ಕಾರ್ಯ
ಚಿತ್ರದುರ್ಗ, ಜುಲೈ 22: ಸಾಮಾನ್ಯವಾಗಿ ಮನುಷ್ಯನಿಗೆ ಒಮ್ಮೊಮ್ಮೆ ಒಪ್ಪೊತ್ತಿನ ಊಟಕ್ಕೂ ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ. ಅದೇಷ್ಟೋ ಮನುಷ್ಯರು ಊಟವಿಲ್ಲದೆ ಹಸಿವಿನಿಂದ ಬಳಲಿ ಪ್ರಾಣ ಬಿಟ್ಟಿರುವ ಸಂಗತಿಗಳು ಕಣ್ಮುಂದೆ ನಡೆದು ಹೋಗಿವೆ. ಹಸಿವು ಎನ್ನುವುದು ಎಲ್ಲರಿಗೂ ಬರುತ್ತದೆ.
ಕೊರೊನಾದಿಂದ ಹಸಿವಿನ ಮಹತ್ವ ಏನು ಎಂಬುದು ಕೆಲವರಿಗೆ ತಿಳಿದಿದೆ. ಆದರೆ ಇಲ್ಲೊಂದು ಸಮಾನ ಮನಸ್ಕರ ತಂಡ ಹಸಿವಿನಿಂದ ಬಳಲುತ್ತಿರುವ ಬಡವರ ಹೊಟ್ಟೆ ತುಂಬಿಸುವ ಮೂಲಕ ಬಡ ರೋಗಿಗಳಿಗೆ ಆಸರೆಯಾಗಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಆರಂಭಿಸಿಕೊಂಡು ಬಂದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರೋಟರಿ ಕ್ಲಬ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಮಾನ ಮನಸ್ಕರ ತಂಡದವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ಊಟ ಕೊಡುವ ಮೂಲಕ ಸಮಾಜಮುಖಿ ಕಾರ್ಯ ಆರಂಭಿಸಿದ್ದಾರೆ.
ಈ ಅನ್ನದಾನ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಾರದಲ್ಲಿ 4 ದಿನ ಮಧ್ಯಾಹ್ನ ಸಮಯದಲ್ಲಿ ಉಚಿತವಾಗಿ ಊಟವನ್ನು ನೀಡಲಾಗುತ್ತಿದೆ. ಈ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಇವರ್ಯಾರು ಸರ್ಕಾರಿ ನೌಕರರಿಲ್ಲ ಮತ್ತು ದೊಡ್ಡ ದೊಡ್ಡ ಶ್ರೀಮಂತರಲ್ಲ. ಸಣ್ಣಪುಟ್ಟ ಅಂಗಡಿಗಳು, ವ್ಯಾಪಾರ ವಹಿವಾಟು ನಡೆಸುತ್ತಿರುವ ಸಮಾನ ಮನಸ್ಕರ ಈ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರತರಾಗಿರುವ ಇವರುಗಳು ಈ ಕಾರ್ಯಕ್ಕೆ ಮುಂದಾಗಿರುವುದು ಮೆಚ್ಚುಗೆಯಾಗಿದೆ.

ಯಾವುದೇ ಜನಪ್ರತಿನಿಧಿಗಳ ಬಳಿಯಾಗಲಿ, ಸರ್ಕಾರದಿಂದ ಆಗಲಿ ಹಣ ಪಡೆಯದೇ ತಾವೇ ಇಂತಿಷ್ಟು ಹಣ ಸೇರಿಸಿ, ಉಪ್ಪಿಟ್ಟು, ಚಿತ್ರಾನ್ನ, ಪಲಾವ್, ಪುಳಿಯೋಗರೆ, ಈಗೆ ವಿವಿಧ ರೀತಿಯ ಊಟವನ್ನು ತಯಾರಿಸಿ ಆಸ್ಪತ್ರೆಯ ರೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಉಚಿತ ಊಟದ ವ್ಯವಸ್ಥೆ ನೀಡುತ್ತಾ ಬರುತ್ತಿದ್ದಾರೆ.
ಇದಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಊಟಕ್ಕೆ ಕೈ ತೊಳೆಯಲು ಹಾಗೂ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅನ್ನು ಸಹ ಸ್ವಂತ ಹಣದ ಖರ್ಚಿನಲ್ಲಿ ಮಾಡಿಸಿರುವುದು ಮತ್ತೊಂದು ವಿಶೇಷತೆಯಾಗಿದೆ. ಇದಲ್ಲದೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಾಣಂತಿಯರು ಕುಳಿತು ಊಟ ಮಾಡುವ ಆಸನದ ವ್ಯವಸ್ಥೆ ಮಾಡಿರುವುದು ಮತ್ತೊಂದು ವಿಶೇಷತೆಯಾಗಿದೆ.
ವಾರದ ಏಳು ದಿನವೂ ಊಟದ ವ್ಯವಸ್ಥೆ
ಮಾನವನ ಸೇವೆ, ಮಾಧವನ ಸೇವೆ ಎಂಬಂತೆ ಮುಂಬರುವ ದಿನಗಳಲ್ಲಿ ಸಮಾನ ಮನಸ್ಕರ ದಾನಿಗಳು ಹಾಗೂ ಸ್ನೇಹಿತರ ಸಹವಾಸದಿಂದ ವಾರದ ಏಳು ದಿನವೂ ಸಹ ಮಧ್ಯಾಹ್ನದ ಸಮಯದಲ್ಲಿ ಊಟದ ವ್ಯವಸ್ಥೆ ಮಾಡುವ ಗುರಿಯನ್ನು ಈ ಸಮಾನ ಮನಸ್ಕರ ತಂಡ ಚಿಂತಿಸಿದ್ದಾರೆ.
ದೂರದ ಗ್ರಾಮೀಣ ಭಾಗಗಳಿಂದ ಬರುವ ರೋಗಿಗಳು ಹಾಗೂ ಸಂಬಂಧಿಕರ ಬಳಿ ಬಸ್ ಚಾರ್ಜ್ ಇಲ್ಲದೇ ತೊಂದರೆ ಅನುಭವಿಸುತ್ತಾರೆ. ಅದೇಷ್ಟೋ ಜನರು ಹಸಿವಿನಿಂದ ಬಳಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಬಡ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಈ ನಮ್ಮ ಅಳಿಲು ಸೇವೆ ಅನುಕೂಲವಾಗಲಿದೆ. ಈ ಸೇವೆಯಿಂದ ನಮಗೆ ಶಾಂತಿ, ನೆಮ್ಮದಿ ಸಿಗುತ್ತಿದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳ ಸಂಬಂಧಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಸಮಾನ ಮನಸ್ಕ ಗೆಳೆಯರ ಬಳಗದ ಎಂ.ಎಸ್ ರಾಘವೇಂದ್ರ ತಿಳಿಸಿದರು.












Click it and Unblock the Notifications