Breaking: ಹಿರಿಯೂರು ಬಳಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ಸಾವು, ಹತ್ತಕ್ಕೂ ಹೆಚ್ಚು ಜನಕ್ಕೆ ಗಾಯ
ಚಿತ್ರದುರ್ಗ ಡಿಸೆಂಬರ್ 13: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ (ತೊರೆ ಸೇತುವೆ ಬಳಿ) ಬಳಿ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಕಾಫಿ ಹೌಸ್‌ನ ಆಲೂರು ಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪ ಹೂಗಾರ್ (26), ರಮೇಶ್ (28) ಮತ್ತು ಪ್ರಶಾಂತ್ ಹಟ್ಟಿ (36) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗದಗ ಜಿಲ್ಲೆಯ ಹುಯಿಗೊಳ ಗ್ರಾಮದವರಾಗಿದ್ದಾರೆ. ಇನ್ನು ಗಾಯಗೊಂಡಿರುವ ಹತ್ತು ಜನರನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈರುಳ್ಳಿ ತುಂಬಿಕೊಂಡು ಚಿತ್ರದುರ್ಗ ಕಡೆಯಿಂದ ಬೆಂಗಳೂರು ಕಡೆ ಹೋಗುವಾಗ ಐಷರ್ ಲಾರಿ ಟೈರ್ ಸ್ಫೋಟಗೊಂಡು ಪಲ್ಟಿ ಹೊಡೆದಾಗ ಹಿಂದೆಯಿಂದ ಬಂದ ಮತ್ತೊಂದು ಕಾರು, ಲಾರಿಗಳು ಡಿಕ್ಕಿಯಾಗಿ ಮತ್ತೊಂದು ಈ ಅವಘಡ ಸಂಭವಿಸಿದೆ. ಅಪಘಾತದ ರಭಸಕ್ಕೆ ಈರುಳ್ಳಿ ಚೀಲಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.

ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video
ಟ್ರಾಫಿಕ್ ಜಾಮ್
ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತ ಸಂಭವಿಸಿದ್ದರಿಂದ ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.












Click it and Unblock the Notifications