ಹಿರಿಯೂರಿನಲ್ಲಿ ಅಲೆಮಾರಿ ವಸತಿ ಶಾಲೆ ಅನುಮೋದನೆಗೆ ಡಿಸಿಎಂಗೆ ಮನವಿ
ಚಿತ್ರದುರ್ಗ, ಜೂನ್ 18: ಹಿರಿಯೂರು ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಅಲೆಮಾರಿ ಸಮುದಾಯದವರು ನೆಲೆಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಐಮಂಗಲ ಹೋಬಳಿಯ ಮದ್ದನಕುಂಟೆಯಲ್ಲಿ ಅಲೆಮಾರಿ ವಸತಿ ಶಾಲೆಯನ್ನು ಆಡಳಿತಾತ್ಮಕ ಅನುಮೋದನೆ ನೀಡಿ ಮಂಜೂರಾತಿ ಮಾಡುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್ ಅವರು ಮನವಿ ಮಾಡಿದರು.
Recommended Video
ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಅವರು, ಡಾ. ನಂಜುಂಡಪ್ಪ ವರದಿಯ ಪ್ರಕಾರ ಹಿರಿಯೂರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಕಾಡುಗೊಲ್ಲ, ಜೋಗಿ, ಗೊಲ್ಲ, ಹೆಳವ, ಉಪ್ಪಾರ, ಇತರೆ ಸಮುದಾಯಗಳು ಹೆಚ್ಚಾಗಿ ವಾಸವಾಗಿವೆ. ಸರ್ಕಾರದ ವರದಿಯ ಪ್ರಕಾರ ಹಿರಿಯೂರು, ಶಿರಾ, ಪಾವಗಡ ತಾಲೂಕಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ವಸತಿ ಶಾಲೆಗಳನ್ನು ತೆರೆಯುವಂತೆ ಸುತ್ತೋಲೆ ಇದೆ. ಹಾಗೆಯೇ ಹಿರಿಯೂರು ತಾಲ್ಲೂಕಿನಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿಗಳು ಸಮಾಜದವರು ಶೈಕ್ಷಣಿಕವಾಗಿ ಸಬಲರಾಗಲು ವಸತಿ ಶಾಲೆಯನ್ನು ತೆರೆಯುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.

ಹಾಗಾಗಿ ವಸತಿ ಶಾಲೆ ಮಂಜೂರಾತಿಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿರಿಯೂರು ಭಾಗದಲ್ಲಿ ಸ್ಥಳಾವಕಾಶಕ್ಕಾಗಿ ಭೂಮಿ ಲಭ್ಯವಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ವಸತಿ ಶಾಲೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಎಂದು ಭೇಟಿ ಮಾಡಿ ತಿಳಿಸಿದ್ದಾರೆ.
ಡಿ.ಟಿ. ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕೂಡಲೇ ಕಡತದಲ್ಲಿ ಮಂಡಿಸಿ ಶಾಲೆ ನಿರ್ಮಾಣಕ್ಕೆ ಆದೇಶಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications