Gold coins: ಮೊಳಕಾಲ್ಮೂರು ತಾಲೂಕಿನ ಈ ಊರಲ್ಲಿ ಬಂಗಾರದ ನಾಣ್ಯಗಳಿಗಾಗಿ ಜನರಿಂದ ತೀವ್ರ ಶೋಧ
ಚಿತ್ರದುರ್ಗ, ಡಿಸೆಂಬರ್, 24: ಬಂಗಾರದ ನಾಣ್ಯಗಳ ಹುಡುಕಾಟಕ್ಕಾಗಿ ಜನರು ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ತೀವ್ರ ಹುಡುಕಾಟ ನಡೆಸಿರುವ ಘಟನೆ ಮೊಳಕಾಲ್ಮೂರು ತಾಲೂಕಿನಲ್ಲಿ ಘಟನೆ ನಡೆದಿದೆ.
ಮೊಳಕಾಲ್ಮೂರು ತಾಲೂಕಿನ ಕೆಳಗಳಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜನರು ತಂಡೋಪತಂಡವಾಗಿ ನಾಣ್ಯವನ್ನು ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಜನರು ಈ ನಾಣ್ಯಗಳನ್ನು ಪಡೆಯಲು ತೀವ್ರ ಶೋಧ ನಡೆಸುತ್ತಿದ್ದು, ಬಂಗಾರದ ನಾಣ್ಯಗಳು ಸಿಗುತ್ತವೆ ಎಂಬ ವದಂತಿಯನ್ನು ತಿಳಿಯುತ್ತಿದ್ದಂತೆ ನಾನಾ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ, ಜನ ಮರಳೋ ಜಾತ್ರೆ ಮರಳೋ ಎನ್ನುವಂತೆ ಹುಡುಕಾಟ ನಡೆಸಿದರು.

ಸ್ಥಳದಲ್ಲಿ ಈಗಾಗಲೇ ಕೆಲವು ನಾಣ್ಯಗಳು ಸಿಕ್ಕಿದ್ದು, ಈ ನಾಣ್ಯಗಳು ಬಂಗಾರ ಅಥವಾ ತಾಮ್ರದ ನಾಣ್ಯಗಳು ಎಂದು ಇನ್ನು ಕೂಡ ದೃಢಪಟ್ಟಿಲ್ಲ. ನಾಣ್ಯದ ಅಸಲಿಯತ್ತು ತಿಳಿಯದ ಜನರು ನಾ ಮುಂದು ತಾ ಮುಂದು ಎನ್ನುವಂತೆ ಬಂಗಾರದ ನಾಣ್ಯಗಳನ್ನು ಹುಡುಕಲು ಮುಗಿಬಿದ್ದಿದ್ದಾರೆ.
ಮಾರ್ಗ ಮಧ್ಯದಲ್ಲೇ ಹೆಲಿಕಾಪ್ಟರ್ ಲ್ಯಾಂಡ್
ಸಚಿವ ಬೈರತಿ ಸುರೇಶ್ ಪ್ರಮಾಣಿಸುತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಮಾರ್ಗ ಮಧ್ಯದಲ್ಲಿ ಲ್ಯಾಂಡ್ ಆದ ಘಟನೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ.
ತಾಲೂಕಿನ ಆರನಕಟ್ಟಿ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 11:30ರ ಸಮಯಕ್ಕೆ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗಿದೆ. ಸಚಿವ ಭೈರತಿ ಸುರೇಶ್ ಅವರು ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಗದಗ ಜಿಲ್ಲೆಯ ಸಂಕೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದಾಗ ಹೆಲಿಕ್ಯಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆ ಆರನಕಟ್ಟೆ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಹೆಲಿಕ್ಯಾಪ್ಟರ್ ಅನ್ನು ಲ್ಯಾಂಡ್ ಮಾಡಲಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಹಾಗೂ ದುರ್ಘಟನೆ ಸಂಭವಿಸಿಲ್ಲ. ಇನ್ನು ಸಚಿವರು ಹೆಲಿಕ್ಯಾಪ್ಟರ್ ಅರ್ಧಕ್ಕೆ ಬಿಟ್ಟು ಕಾರಿನ ಮೂಲಕ ಸಂಕೇಶ್ವರ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಲಿಕ್ಯಾಪ್ಟರ್ ನೋಡಲು ಗ್ರಾಮದ ಸುತ್ತಮುತ್ತಲಿನ ಜನರು ಬಂದು ಹೆಲಿಕಾಪ್ಟರ್ ವೀಕ್ಷಣೆ ಮಾಡಿದರು.












Click it and Unblock the Notifications