ಕವಾಡಿಗರಹಟ್ಟಿ ಅಭಿವೃದ್ದಿಗೆ 4 ಕೋಟಿ ರೂಪಾಯಿ ಅನುದಾನ ಮಂಜೂರು: ಸಚಿವ ಡಿ.ಸುಧಾಕರ್
ಚಿತ್ರದುರ್ಗ, ಆಗಸ್ಟ್, 15: ಕವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಜರುಗಿದ ಅಹಿತಕರ ಘಟನೆ ಬಳಿಕ, ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ 04 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕವಾಡಿಗರ ಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಸಂಭವಿಸಿದ ಅಹಿತಕರ ಘಟನೆ ಸಂಬಂಧ ಸಮಸ್ಯೆಗಳ ನಿವಾರಣೆಗೆ ಹಾಗೂ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, 2.5 ಲಕ್ಷ ಲೀಟರ್ ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕ್, ಹೊಸದಾಗಿ ನಳದ ಸಂಪರ್ಕ ಮುಂತಾದ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು 04 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದರು.

ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಅಲ್ಲದೆ ಇಲ್ಲಿ ಪರಿಶಿಷ್ಟರೇ ಹೆಚ್ಚು ವಾಸ ಇರುವುದರಿಂದ ವಸತಿ ರಹಿತರಿಗೆ ಹೊಸದಾಗಿ ಮನೆ ಮಂಜೂರು ಮಾಡಲು ಸಹ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ಕುರಿತು ಸಮಾಜ ಕಲ್ಯಾಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಸಾಮೂಹಿಕ ಶೌಚಾಲಯ ಹಾಗೂ ವೈಯಕ್ತಿಕ ಶೌಚಾಲಯಗಳನ್ನು ಕೂಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.
ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಆರ್ಥಿಕ ಪ್ರೋತ್ಸಾಹ ನೀಡುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ "ಗೃಹಲಕ್ಷ್ಮೀ" ಯೋಜನೆಗೆ ಇದೇ ಆಗಸ್ಟ್ 27ರಂದು ಚಾಲನೆ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಿದರೆ, ಉಳಿದಂತೆ ಎಲ್ಲ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿಯೂ ಯೋಜನೆಯನ್ನು ಜಾರಿಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 3,47,620 ಫಲಾನುಭವಿಗಳು ಅಂದರೆ ಶೇಕಡಾ 87ರಷ್ಟು ನೊಂದಣಿ ಮಾಡಿಸಿಕೊಂಡಿದ್ದು, ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಅಂದು ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಮಂಜೂರಾಗಲಿದ್ದು, ಈ ಕುರಿತು ಫಲಾನುಭವಿಗಳ ಮೊಬೈಲ್‍ಗೆ ಸಂದೇಶ ರವಾನೆಯಾಗಲಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಈ ವೇಳೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ್ ಸಿಇಒ ಸೋಮಶೇಖರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications