ಒನ್ ಇಂಡಿಯಾ ವರದಿ ಇಂಪ್ಯಾಕ್ಟ್; ಹಿರಿಯೂರಿನಲ್ಲಿ ರಿಪೇರಿಯಾಯ್ತು ಕುಡಿಯುವ ನೀರಿನ ಘಟಕ
ಚಿತ್ರದುರ್ಗ, ಫೆಬ್ರವರಿ 22: ಹಿರಿಯೂರಿನ ಗ್ರಾಮವೊಂದರಲ್ಲಿ ಕುಡಿಯುವ ನೀರಿನ ಘಟಕಗಳು ಪ್ರಯೋಜನಕ್ಕೆ ಬಾರದೇ ಕುಡುಕರ ತಾಣವಾಗಿರುವ ಕುರಿತು ಪ್ರಕಟವಾಗಿದ್ದ ವರದಿಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕೊನೆಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿದ್ದಾರೆ.
ಫೆಬ್ರವರಿ 20ರಂದು "ಒನ್ಇಂಡಿಯಾ ಕನ್ನಡ"ದಲ್ಲಿ "ಕುಡುಕರ ತಾಣವಾದ ಶುದ್ಧ ಕುಡಿಯುವ ನೀರಿನ ಘಟಕ" ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ದೊಡ್ಡಗಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಕುಡುಕರ ತಾಣವಾಗಿತ್ತು. ಘಟಕದಲ್ಲಿ ಸಾರಾಯಿ ಪಾಕೆಟ್ ಗಳು ಬಿದ್ದಿರುವುದು ಕಂಡುಬಂದಿತ್ತು. ಈ ಕುರಿತು ವರದಿಯನ್ನು ಪ್ರಕಟಿಸಲಾಗಿತ್ತು.

ವರದಿಯಿಂದ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಒಂದೇ ದಿನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅಮ್ಮನಹಟ್ಟಿ ಪಾರ್ಥ ಮೀಸೆ ಎಂಬ ಯುವಕ, "ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕೆಟ್ಟು ನಿಂತಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿ, ನೀರಿನ ವ್ಯವಸ್ಥೆ ಮಾಡಿದ್ದಾರೆ. ತಾಲೂಕಿನಲ್ಲಿ ಇನ್ನೂ ಕೆಲವು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲಾ ಘಟಕಗಳೂ ಕಾರ್ಯ ನಿರ್ವಹಿಸುವಂತಾಗಬೇಕು. ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು" ಎಂದಿದ್ದಾರೆ.

ದೊಡ್ಡಗಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿದಂತೆ ಬಬ್ಬೂರು ಭೋವಿ ಕಾಲೋನಿ, ಬಬ್ಬೂರು ಫಾರಂ, ಹೂವಿನಹೊಳೆ ಜನತಾ ಕಾಲೋನಿ, ಮತ್ತಿತರ ಕಡೆಗಳಲ್ಲಿ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ತಕ್ಷಣ ರಿಪೇರಿ ಮಾಡಬೇಕಿದೆ.












Click it and Unblock the Notifications