ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ
ಚಿತ್ರದುರ್ಗ, ಅಕ್ಟೋಬರ್, 10: ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಹಿರಿಯೂರಿಗೆ ಆಗಮಿಸಿದ್ದು, ನಗರದ ಹೊರವಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸ್ಥಳದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸುರ್ಜೇವಾಲ, ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಹುಲ್ ಜೊತೆ ಹೆಜ್ಜೆ ಹಾಕಿದ ಮಹಿಳೆಯರು
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡಿಗೆ ಪ್ರವೇಶ ಮಾಡಿದೆ. ರಾಹುಲ್ ಗಾಂಧಿ ಒಂದು ತಿಂಗಳಿನಿಂದ ಶುರು ಮಾಡಿದ ಯಾತ್ರೆಯಲ್ಲಿ ಹಲವು ರೀತಿಯ ಅನುಭವಗಳನ್ನು ಪಡೆದುಕೊಂಡಿದ್ದು, ಎಷ್ಟೋ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಇದೀಗ ಚಿತ್ರದುರ್ಗದಲ್ಲಿಯೂ ಅಂತಹ ಅವಿಸ್ಮರಣೀಯ ಕ್ಷಣಗಳನ್ನು ಕಾಣಲು ಮುಂದಾಗಿದ್ದಾರೆ.

ಇಂದು ಬೆಳಗ್ಗೆಯಿಂದ ಚಿತ್ರದುರ್ಗದಲ್ಲಿ ಪಾದಯಾತ್ರೆ ಆರಂಭವಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿಗೆ ಯಾತ್ರೆ ಆಗಮಿಸಿದ್ದು, ಸುಮಾರು 11 ಕಿಲೋ ಮೀಟರ್ ನಡೆಯಲಿದ್ದಾರೆ. ಬಳಿಕ ಕಾಡಿನ ಹಾದಿಯಲ್ಲಿ ಕಾರಿನ ಮೂಲಕ ಸಂಚಾರ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಮತ್ತೆ ಹಿರಿಯೂರಿನಿಂದ ಪಾದಯಾತ್ರೆ ಆರಂಭ ಆಗಲಿದೆ. ಇದೇ ವೇಳೆ ಸಮೀಕ್ಷಾ ವರದಿಯ ಆಧಾರದ ಮೇಲೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಭಾಗದ ಜನರ ಪ್ರತಿಕ್ರಿಯೆ ನೋಡಿ ಸಂತಸಗೊಂಡಿದ್ದಾರೆ. ಇನ್ನು ಇಂದಿನ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರಿಗೆ ಸನ್ಮಾನ ಮಾಡಲಾಗಿದೆ. ಲಂಬಾಣಿ ಮಹಿಳೆಯರು ರಾಹುಲ್ ಗಾಂಧಿ ಅವರಿಗೆ ಸನ್ಮಾನ ಮಾಡಿದ್ದು, ಹಾಗೆಯೇ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕುತ್ತಾ ಕಣ್ಣೀರು ಇಟ್ಟಿದ್ದಾರೆ.












Click it and Unblock the Notifications