ಭೂ ಕಬಳಿಕೆ, ದೌರ್ಜನ್ಯ ಆರೋಪ: ಸಚಿವ ಡಿ.ಸುಧಾಕರ್ ರಾಜೀನಾಮೆಗೆ ಪೂರ್ಣಿಮಾ ಶ್ರೀನಿವಾಸ್ ಆಗ್ರಹ
ಚಿತ್ರದುರ್ಗ, ಸೆಪ್ಟೆಂಬರ್ 12: ಭೂ ಕಬಳಿಕೆ, ದೌರ್ಜನ್ಯ ಆರೋಪ ಹಾಗೂ ಜಾತಿ ನಿಂದನೆ ಪ್ರಕರಣ ಆರೋಪ ಎದುರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ರಾಜೀನಾಮೆ ನೀಡುವಂತೆ ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಈ ಕುರಿತು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಶಾಸಕಿ ಕೆ.ಪೂರ್ಣಿಮಾ ಅವರು ಸಚಿವರು ರಾಜೀನಾಮೆ ನೀಡಬೇಕು ಇಲ್ಲವಾದರೆ ಹಿರಿಯೂರು ತಾಲೂಕಿನಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿ, ಇಂದು ಅದೇ ನಮ್ಮ ದಲಿತ ಬಂಧುಗಳ ಮೇಲೆ ಜಾತಿನಿಂದನೆ ಹಾಗೂ ಭೂಕಬಳಿಕೆ ಮಾಡಿ ನ್ಯಾಯ ಕೇಳಲು ಬಂದ ಹೆಣ್ಣು ಮಕ್ಕಳ ಮೇಲೆ ನಿಮ್ಮ ದೌರ್ಜನ್ಯ ಹಾಗೂ ಗೂಂಡಾಗಿರಿ ಎಷ್ಟು ಸರಿ...? ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಸಚಿವರಾದ ನಿಮ್ಮ ಬಾಯಿಯಲ್ಲಿ ಇಂಥ ಮಾತುಗಳು ಹಾಗೂ ಜನಸಾಮಾನ್ಯರ ಬಳಿ ನೀವು ನಡೆದುಕೊಳ್ಳುವ ರೀತಿ ತೀರ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ನಿಮ್ಮ ಸಂಪುಟದ ಸಚಿವರೊಬ್ಬರ ಮೇಲೆ ಅಟ್ರಾಸಿಟಿ ಎಫ್.ಐ.ಆರ್ ಆದರು ಕೂಡ ಇನ್ನೂ ಬಂಧನವಾಗಿಲ್ಲ ಹಾಗೂ ನ್ಯಾಯ ಕೇಳಲು ಹೋದ ಬಡ ಜನರ ಮೇಲೆ ಗೂಂಡಾಗಿರಿ ಮಾಡಿರುವ ನಿಮ್ಮ ಸಚಿವರ ಮೇಲೆ ನಿಮ್ಮ ಕ್ರಮವೇನು ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ ಗೃಹ ಸಚಿವ ಪರಮೇಶ್ವರ್ ಅವರನ್ನೂ ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಪ್ರಶ್ನಿಸಿದ್ದು, ಈ ರೀತಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜನಸಾಮಾನ್ಯರಿಗೂ ಹಾಗೂ ಸಚಿವರಿಗೋ ಒಂದೇ ನ್ಯಾಯವ ಅಥವಾ ಬೇರೆ ಇದೆಯಾ ಎಂದಿದ್ದಾರೆ.
ಈ ಪ್ರಕರಣದ ರೂವಾರಿಯಾಗಿರುವ ಸಚಿವ ಡಿ.ಸುಧಾಕರ್ ಅವರು ತಮ್ಮ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು, ಇಲ್ಲವಾದರೆ ತಾಲೂಕಿನಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.












Click it and Unblock the Notifications