ಹಿರಿಯೂರು: ರಾತ್ರೋರಾತ್ರಿ ಕುವೆಂಪು & ಪುನೀತ್ ರಾಜ್‌ಕುಮಾರ್ ಪ್ರತಿಮೆ ತೆರವು
ಚಿತ್ರದುರ್ಗ, ಅಕ್ಟೋಬರ್ 27: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಇತ್ತೀಚೆಗಷ್ಟೇ ರಾತ್ರೋರಾತ್ರಿ ಮಹನೀಯರಿಬ್ಬರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ನಾಲ್ಕೈದು ದಿನಗಳ ಹಿಂದಷ್ಟೇ ಅನಾವರಣಗೊಳಿಸಲಾಗಿತ್ತು. ಆದರೆ ಇದೀಗ ರಾತ್ರೋರಾತ್ರಿ ನಗರಸಭೆ ಅಧಿಕಾರಿಗಳು ಪ್ರತಿಮೆಗಳನ್ನು ತೆರವುಗೊಳಿಸಿದ್ದಾರೆ.
ಹಿರಿಯೂರು ನಗರದ ರಂಜಿತಾ ಹೋಟೆಲ್ ಮುಂಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಮೆ ಹಾಗೂ ಹಿರಿಯೂರು ಇಂದಿರಾ ಕ್ಯಾಂಟೀನ್ ಬಳಿ ಕರ್ನಾಟಕ ರತ್ನ ನಟ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಷ್ಠಾಪಿಸಿದ್ದರು. ಇದೀಗ ಅಧಿಕಾರಿಗಳು ಏಕಾಏಕಿ ಪುತ್ಥಳಿಗಳನ್ನು ತೆರವುಗೊಳಿಸಿದ್ದಾರೆ.

ಮಾಹಿತಿ ತಿಳಿದ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ಜೊತೆ ಕೆಲಕಾಲ ವಾಗ್ವಾದ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಯಾರಿಗೂ ಕ್ಯಾರೇ ಎನ್ನದೇ ಪ್ರತಿಮೆಗಳನ್ನು ತೆರವುಗೊಳಿಸಿದ್ದಾರೆ. ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ಥಳಿಗಳ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕರವೇ ಪ್ರಧಾನ ಕಾರ್ಯದರ್ಶಿ ದಾದಾಪಿರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳಿಂದಲೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ಪ್ರತಿಮೆಗಳ ನಿರ್ಮಾಣ
ಅಕ್ಟೋಬರ್ 2ರಂದು ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ಎರಡು ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಹಿರಿಯೂರು ನಗರದ ಇಂದಿರಾ ಕ್ಯಾಂಟೀನ್ ಬಳಿ ಇರುವ ನೂತನ ಬಿಇಓ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರತ್ನ ನಟ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಮತ್ತೊಂದು ಕಡೆ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಕೂಡ ನಿರ್ಮಾಣ ಮಾಡಲಾಗಿತ್ತು.
ರಾತ್ರೋರಾತ್ರಿ ನಿರ್ಮಾಣವಾದ ಈ ಪ್ರತಿಮೆಗಳಿಗೆ ಕೆಂಪು ಹಾಗೂ ಹಳದಿ ಬಣ್ಣದ ಬಟ್ಟೆಯನ್ನು ಸುತ್ತಲಾಗಿತ್ತು. ಪ್ರತಿಮೆಗಳ ಕೆಳ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎಂದು ಬರೆಯಲಾಗಿತ್ತು. ಈ ಎರಡು ಪ್ರತಿಮೆಗಳನ್ನು ಬೆಂಗಳೂರಿನಿಂದ ಸಿದ್ಧಪಡಿಸಿ ಹಿರಿಯೂರಿಗೆ ತರಲಾಗಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆ ಅನಾವರಣಗೊಳಿಸಲಾಗಿತ್ತು. ಒಂದೇ ನಗರದಲ್ಲಿ ಎರಡು ಪ್ರತಿಮೆಗಳು ನಿರ್ಮಾಣವಾಗಿದ್ದು ತೀವ್ರ ಕುತೂಹಕ್ಕೆ ಕಾರಣವಾಗಿತ್ತು. ಆದರೆ ಇದೀಗ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications