ಚಿತ್ರದುರ್ಗ ಮುರುಘಾ ಶ್ರೀಗೆ ಮತ್ತೆ ಬಂಧನದ ಭೀತಿ, ಯಾವ ಪ್ರಕರಣದಲ್ಲಿ ಗೊತ್ತಾ?
ಚಿತ್ರದುರ್ಗ, ನವೆಂಬರ್, 20: ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿದ್ದು ಬಿಡುಗಡೆಯಾಗಿರುವ ಮುರುಘಾ ಶರಣರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.
ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿರುವ ಚಿತ್ರದುರ್ಗದ ಮುರುಘಾಶ್ರೀಗೆ 2ನೇ ಪ್ರಕರಣ ಕಂಟಕವಾಗಿದೆ.

2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ 1ನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದು ಇದೀಗ ಹೊರಗಡೆ ಬಂದಿರುವ ಚಿತ್ರದುರ್ಗದ ಮುರುಘಾಶ್ರೀಗೆ ಇದೀಗ ಮತ್ತೆ ಬಂಧನದ ಭೀತಿ ಶುರುವಾಗಿದೆ.
ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ
ಇನ್ನು ಇತ್ತೀಚೆಗಷ್ಟೇ ವರ್ಷದ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದ ಆರೋಪಿಗೆ ಚಿತ್ರದುರ್ಗ ಜಿಲ್ಲೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಪೋಕ್ಸೋ) 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅತ್ತಿಮಗ್ಗೆ ಗ್ರಾಮದ ತಿಮ್ಮಯ್ಯ ಎಂಬ ಆರೋಪಿ ಚಾಕೊಲೇಟ್ ಕೊಡುವ ನೆಪದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲೀಸ್ ಇನ್ಸ್‌ಪೆಕ್ಟರ್ ಎಂ.ಡಿ.ಫೈಜುಲ್ಲಾ ಇವರು ತನಿಖೆಯನ್ನು ಪೂರೈಸಿ ಪೋಕ್ಸೋ ಕಾಯಿದೆಯಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಂತರ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ.ಕೋಮಲ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಕಠಿಣ ಸಜೆ ಮತ್ತು 10,000 ರೂಪಾಯಿ ದಂಡ ವಿಧಿಸಿ ನವೆಂಬರ್ 17ರಂದು ತೀರ್ಪು ನೀಡಿತ್ತು. ಮತ್ತು ನೊಂದ ಬಾಲಕಿಗೆ ಪರಿಹಾರವಾಗಿ ಒಟ್ಟು 10,000 ರೂಪಾಯಿ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಚಿತ್ರದುರ್ಗ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಹೆಚ್.ಆರ್. ಜಗದೀಶ್ ವಾದಿಸಿದ್ದರು.












Click it and Unblock the Notifications