ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮತ ಹಾಕದೆ ದ್ರೋಹ: ಮಾಜಿ ಸಂಸದ ಚಂದ್ರಪ್ಪ
ಚಿತ್ರದುರ್ಗ, ಜನವರಿ 07: ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯದ ಜೊತೆಗೆ ಹಲವು ಜನಪರ ಯೋಜನೆಗಳನ್ನು ಕೊಟ್ಟಿದ್ದರೂ, ಅವುಗಳನ್ನು ಉಪಯೋಗಿಸಿಕೊಂಡು ಚುನಾವಣೆಯಲ್ಲಿ ಜನರು ದ್ರೋಹ ಬಗೆದರು ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ್ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನ ಕೊಟ್ಟವರನ್ನು ಬಿಟ್ಟು ಬೇರೆಯವರಿಗೆ ಮತ ಹಾಕಿದ್ದೀರಾ, ಇದು ನಂಬಿಕೆ ದ್ರೋಹ ಮಾಡಿದ ಹಾಗಲ್ಲವೇ? ಎಂದು ಪ್ರಶ್ನಿಸಿದರು.
ನಾವೆಲ್ಲರೂ ಈ ದೇಶದ ಒಂದೇ ತಾಯಿಯ ಮಕ್ಕಳು. ಆದರೆ ಬಿಜೆಪಿಯವರು ದೇಶದ ಜನರನ್ನು ಒಡೆಯುವ ಯತ್ನ ಮಾಡುತ್ತಿದ್ದಾರೆ. ದೇಶದ ಮುಗ್ಧ ಜನರನ್ನು ಮರುಳು ಮಾಡಿ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಪಕ್ಷದ ವಿರುದ್ದ ಮಾತನಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು ಕಾಂಗ್ರೆಸ್ಗೆ ಮತ ಹಾಕದೆ ದ್ರೋಹ ಬಗೆದಿದ್ದಾರೆ ಎಂದು ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತದಾರರ ವಿರುದ್ಧವೇ ಹಿರಿಯೂರಿನಲ್ಲಿ ಕಿಡಿಕಾರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಕೇಂದ್ರ ಸರ್ಕಾರ ಆರು ವರ್ಷಗಳ ಅವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಪಶ್ನಿಸಿದರು.
ಕಾಂಗ್ರೆಸ್ ಪಕ್ಷ ಯಾವಾಗಲೂ ಕಾರ್ಯಕರ್ತರ ಜೊತೆ ಇರುತ್ತದೆ. ಕಲ್ಯಾಣ ರಾಜ್ಯ ನಿರ್ಮಾಣಕ್ಕಾಗಿ ನಿಮ್ಮ ಜೊತೆ ಕಾಂಗ್ರೆಸ್ ಪಕ್ಷ ಸದಾ ಕೈಜೋಡಿಸುತ್ತದೆ ಎಂದು ಭಾಗವಹಿಸಿ ಮಾತನಾಡಿದರು.
ಪೌರತ್ವ ಕಾಯ್ದೆ ವಿರೋಧಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ ಸುಧಾಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಹಾಗೂ ಯುವ ಹೋರಾಟಗಾರ್ತಿ ನಜ್ಮ ನಜೀರ್, ಭವ್ಯ ನರಸಿಂಹಮೂರ್ತಿ, ಮುಸ್ಲಿಂ ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications