ವಾಣಿ ವಿಲಾಸ ಸಾಗರ ಡ್ಯಾಂ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಅನಾವರಣ: ಶಾಸಕಿ ಪೂರ್ಣಿಮಾ
ಚಿತ್ರದುರ್ಗ, ಸೆಪ್ಟೆಂಬರ್ 04: ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ವಾಣಿವಿಲಾಸ ಸಾಗರ ಜಲಾಶಯ 1933ರ ನಂತರ ವರುಣನ ಆರ್ಭಟಕ್ಕೆ ಇದೀಗ ಮತ್ತೆ ಭರ್ತಿ ಆಗಿದೆ. ಭದ್ರಾ ಮೇಲ್ದಂಡೆ ಜಲಾಶಯದಿಂದ 130 ಅಡಿ ನೀರು ಸಂಗ್ರಹವಾಗಿ ಕೋಡಿ ಬಿದ್ದಿದ್ದು, ಜಿಲ್ಲೆಯ ಜನತೆ ಹಾಗೂ ರೈತರ ಮುಖದಲ್ಲಿ ಸಂತೋಷ ಮೂಡಿಸಿದೆ. ಈ ಸಂಭ್ರಮಕ್ಕೆ ಕಾರಣರಾದ ಮೈಸೂರಿನ ಮಹಾರಾಜರು ಹಾಗೂ ಮಹಾರಾಣಿ ಅವರನ್ನು ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪೀಡಿತ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರ ದೃಷ್ಟಿಯ ಕೊಡುಗೆಯಿಂದಾಗಿ ಇಂದು ತಾಲ್ಲೂಕಿನ ಸಾವಿರಾರು ರೈತರ ಬಾಳಿನಲ್ಲಿ ಹೆಸರಾಗಿದ್ದಾರೆ ಎಂದರು.
ವಾಣಿ ವಿಲಾಸ ಸಾಗರ ಜಲಾಶಯ ನಿರ್ಮಾಣ ಮಾಡಿದ್ದರಿಂದ ತಾಲೂಕಿನಲ್ಲಿ ಕಬ್ಬು ಬೆಳೆಯಲು ಆರಂಭಿಸಿದರು. ಆಗ ಸಕ್ಕರೆ ಕಾರ್ಖಾನೆ ಸಹ ಪ್ರಾರಂಭವಾಗಿ ನೂರಾರು ಜನರಿಗೆ ಉದ್ಯೋಗ ದೊರಕಿತು. ದುರಾದೃಷ್ಟವಶಾತ್ ಜಲಾಶಯದಲ್ಲಿ ನೀರು ಇಲ್ಲದೆ ಇದ್ದುದರಿಂದ ಕಬ್ಬು ಬೆಳೆಯಲು ನಿಲ್ಲಿಸಿದರು. ಈಗ ಕಾರ್ಖಾನೆ ಸ್ಥಗಿತಗೊಂಡಿದೆ ಜಲಾಶಯದಲ್ಲಿ ನೀರು ಭರ್ತಿ ಆಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆ ಸಚಿವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಮಹಾನ್ ವ್ಯಕ್ತಿಯ ಪ್ರತಿಮೆ ಅನಾವರಣಕ್ಕೆ ಸಿದ್ಧತೆ
ಅಣೆಕಟ್ಟು ನಿರ್ಮಿಸುವ ಮೂಲಕ ಈ ತಾಲೂಕನ್ನು ಸಮೃದ್ಧಗೊಳಿಸಿ, ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಮೈಸೂರು ಅರಸರ ಜ್ಞಾಪಕಾರ್ಥವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಅನಾವರಣ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಂದಿನ ಮುರ್ನಾಲ್ಕು ತಿಂಗಳಲ್ಲಿ ಪ್ರತಿಮೆ ಅನಾವರಣ ಮಾಡಲಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಕೈ ಬೀಡಲು ಸಾಧ್ಯವಿಲ್ಲ. ಹಾಗಾಗಿ ಜಲಾಶಯ ಬಹುವರ್ಷಗಳ ಬಳಿಕ ತುಂಬಿದೆ ಎಂದರು.

ಬಹುದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತೆ
ಕೋಡಿ ಹರಿದಿರುವ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ನಮ್ಮ ಸಂಪ್ರದಾಯ ಆಗಿದೆ. ಈ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಮೈಸೂರು ಮಹಾರಾಜರಿಗೆ ಪತ್ರ ಬರೆಯಲಾಗಿದೆ. ಜೊತೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ದಿನಾಂಕ ನಿಗದಿಪಡಿಸಿದ ನಂತರ ಬಹುದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಬಿಎಸ್‌ವೈ, ಸಿಎಂ ಬಗ್ಗೆ ಶಾಸಕಿ ಅಭಿಪ್ರಾಯ
2018ರಲ್ಲಿ ಶಾಸಕಿ ಆಗಿ ಆಯ್ಕೆ ಆದ ಮೇಲೆ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ ಎದುರಾಯಿತು. ಸಂಬಂಧಪಟ್ಟ ಸಚಿವರು, ಸರ್ಕಾರ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು. ಇದಕ್ಕೂ ಮೊದಲು ಭದ್ರಾ ಮೇಲ್ದಂಡೆ ಯೋಜನೆಯ ನೀರಿಗಾಗಿ ತಾಲೂಕಿನಲ್ಲಿ ರೈತ ಹೋರಾಟಗಾರರು ಹಾಗೂ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಅದರ ಪ್ರತಿಫಲವಾಗಿ 2008 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನಕ್ಕೆ ಮೊದಲ ಬಾರಿಗೆ ಹಸಿರು ನಿಶಾನೆ ನೀಡಿದ್ದರು. ಅಷ್ಟೇ ಅಲ್ಲ, ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸಹ ವಾಣಿ ವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ 5 ಟಿಎಂಸಿ ನೀರು ಅನುಮೋದನೆ ನೀಡಿ ಮಾಡಿ ಆದೇಶ ನೀಡಿದ್ದರು.

2018ರಲ್ಲಿ ಬಿಜೆಪಿಯಿಂದ ಕಾಮಗಾರಿ ಮುಕ್ತಾಯ
ಬಿಜೆಪಿ ಸರ್ಕಾರದ ಇಚ್ಚಾಶಕ್ತಿ ಹಾಗೂ ನಮ್ಮ ಜಿಲ್ಲೆಯ ಸಂಸದರು, ಶಾಸಕರು, ರೈತ ಹೋರಾಟಗಾರರ ಪರಿಶ್ರಮದ ಪ್ರತಿಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಯಿತು. 2013ರ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿತ್ತು. ಆದರೆ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸಲು ಆಗಲಿಲ್ಲ. 2018ರ ಬಳಿಕ ಬಂದ ಬಿಜೆಪಿ ಸರ್ಕಾರ ಇಚ್ಚಾ ಶಕ್ತಿಯಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೇಗವಾಗಿ ಮುಗಿದಿದ್ದು, ಡ್ಯಾಂಗೆ 2019ರಲ್ಲಿ ಮೊದಲ ಬಾರಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಬರಲು ಕಾರಣವಾಯಿತು. ಹಾಗಾಗಿ ಹೆಚ್ಚು ಮಳೆಯಿಂದಾಗಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್ಆರ್ ತಿಮ್ಮಯ್ಯ, ನೀರಾವರಿ ಹೋರಾಟಗಾರ ಆರನಕಟ್ಟೆ ಶಿವಕುಮಾರ್, ಆಲೂರು ಸಿದ್ಧರಾಮಣ್ಣ, ಆರ್.ಕೆ.ಗೌಡ್ರು, ಮೂಡಲ ಗಿರಿಯಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications