ಒಂದಲ್ಲ..ಎರಡಲ್ಲ ಹಿರಿಯೂರಿನಲ್ಲಿ ಬರೋಬ್ಬರಿ ಐದು ಕೆ.ಜಿ ಚಿನ್ನ ವಶ: ಹೆಚ್ಚಿನ ವಿವರ ಇಲ್ಲಿದೆ
ಚಿತ್ರದುರ್ಗ, ಮಾರ್ಚ್ 28: 2024ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಸದ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಸಕ್ರಿಯರಾಗಿದ್ದು, ಅಕ್ರಮವಾಗಿ ಸಾಗಿಸುವ ಹಣ, ಚಿನ್ನಾಭರಣ, ಮದ್ಯ ಸೇರಿದಂತೆ ಇತರ ವಸ್ತುಗಳನ್ನು ಸಾಗಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಒಂದಲ್ಲ..ಎರಡಲ್ಲ ಬರೋಬ್ಬರಿ 5ಕೆಜಿ, 250 ಗ್ರಾಂ, 18 ಕ್ಯಾರೆಟ್ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ಸಿಪಿಐ ರಾಘವೇಂದ್ರ ಕಾಂಡಿಕೆ, ಚುನಾವಣಾ ಅಧಿಕಾರಿ ಅವಿನಾಶ್ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಂಗಾರದ ಉಂಗುರಗಳು, ಸರಗಳು, ಕಿವಿಯೋಲೆ, ಸೇರಿದಂತೆ ಇನ್ನಿತರ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ದಾವಣಗೆರೆಯ ವರ್ಧಮಾನ ಜೂವೆಲ್ಲರಿ ಅಂಗಡಿಗೆ ಸೇರಿದ್ದು ಎನ್ನಲಾಗಿದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಇಷ್ಟು ದೊಡ್ಡ ಮಟ್ಟದ ಬೆಲೆ ಬಾಳುವ ಬಂಗಾರ ಯಾರಿಗೆ ಸೇರಿದ್ದು..? ಯಾಕೆ ಸಂಗ್ರಹಿಸಿಟ್ಟಿದ್ದರು..? ಎಲ್ಲಿಂದ ತಂದಿದ್ದರು..? ಹೀಗೆ ಅಕ್ರಮವಾಗಿ ಸಂಗ್ರಹಿಸಿದ್ದ ಚಿನ್ನದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಸಂಬಂಧ ನಗರಸಭೆ ಸದಸ್ಯ ಬಾಲಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ತುರುವನೂರು ಹೋಬಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಲಕ್ಷಾಂತರ ರೂಪಾಯಿ ವಶ
ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ತುರುವನೂರು ಹೋಬಳಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಎಫ್‍ಎಸ್‌ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ ಕುಮಾರ್ ತುರುವನೂರು ಹೋಬಳಿ ಚೆಕ್‍ಪೋಸ್ಟ್‍ನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಕೊಪ್ಪಳದ ಇರ್ಪಾನ್ ಶೇಕ್ ಬಿನ್ ದಾದಾಪೀರ್ ಎಂಬುವರು ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಜಪ್ತಿ ಪಡಿಸಿಕೊಂಡ ಹಣವನ್ನು ನಗದು ವಶಪಡಿಸಿಕೊಳ್ಳುವ ಪರಿಹಾರ ಸಮಿತಿ ಗಮನಕ್ಕೆ ತಂದಿದ್ದು, ಈ ಹಣವನ್ನು ಚಳ್ಳಕೆರೆಯ ಉಪ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ.












Click it and Unblock the Notifications