ಲಾಕ್ ಡೌನ್ ಮುಂದುವರೆಸುವುದು ಒಳ್ಳೆಯದು: ಸಚಿವ ಜಾರಕಿಹೊಳಿ
ಚಿತ್ರದುರ್ಗ, ಏಪ್ರಿಲ್ ೨೩: ಮೇ 3 ರಂದು ಲಾಕ್ ಡೌನ್ ಅಂತ್ಯಗೊಳ್ಳಲಿದ್ದು, ಕೊರೊನಾ ವೈರಸ್ ಇನ್ನೂ ದೇಶದಲ್ಲಿ ಹಾಗೂ ರಾಜ್ಯದಲ್ಲಿದೆ. ಆದ್ದರಿಂದ ಲಾಕ್ ಡೌನ್ ಮುಂದುವರಿಸುವುದು ಒಳ್ಳೆಯದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಚಿತ್ರದುರ್ಗದಲ್ಲಿ ಸಂಸದ ಎ. ನಾರಾಯಣಸ್ವಾಮಿ ನೀಡುತ್ತಿರುವ ಉಚಿತ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರೋಗ್ಯ ರಕ್ಷಣೆಗಾಗಿ ಎಲ್ಲರೂ ಮನೆಯಲ್ಲಿ ಇರುವುದು ಸೂಕ್ತ ಎಂದ ಅವರು, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್ ಯಡಿಯೂರಪ್ಪ ತೀರ್ಮಾನವೇ ಅಂತಿಮವಾಗಿ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶವನ್ನು ಲಾಕ್ ಡೌನ್ ಮಾಡಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಪಾಲಿಸಬೇಕಿದೆ. ಬೆಳಗಾವಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಇದೆ, ತಬ್ಲಿಕ್ ಜಮಾತ್ ನಲ್ಲಿ ಭಾಗಿಯಾದವರು ವೈಯುಕ್ತಿಕವಾಗಿ ತಪಾಸಣೆಗೆ ಒಳಗಾಗಬೇಕಿದೆ ಎಂದರು.

ಕೊರೊನಾ ದೊಡ್ಡ ರೋಗವಲ್ಲ, ಹಾಗಾಗಿ ತಪ್ಪದೇ ತಪಾಸಣೆಮಾಡಿಸಿಕೊಳ್ಳಬೇಕು. ಕೊರೊನಾ ಸೋಂಕು ಹರಡದಂತೆ ಸಹಕರಿಸುವಂತೆ
ತಬ್ಲಿಘಿಗಳಿಗೆ ಸಚಿವ ಜಾರಕಿಹೊಳಿ ಮನವಿ ಮಾಡಿದರು.
ಸರ್ಕಾರ ಮತ್ತು ಪೊಲೀಸರು ಹೇಳುವುದಕ್ಕಿಂತ ಜನತೆ ತಿಳಿದು ಮಾಡುವುದರಿಂದ ಇದರ ನಿಯಂತ್ರಣ ಸಾಧ್ಯ. ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಇತರರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ.

ಲಾಕ್ ಡೌನ್ ಮುಗಿದ ನಂತರ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾದ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತ್ವರಿತಗೊಳಿಸಲಾಗುವುದು, ನೀರಾವರಿ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲಾಗುವುದು ಎಂದು ಹೇಳಿದರು. ಇದಕ್ಕೂ ಮೊದಲು ಹಿರಿಯೂರು ತಾಲ್ಲೂಕಿನ ವಿವಿ ಸಾಗರದಿಂದ 0.25 ಟಿಎಂಸಿ ವೇದಾವತಿ ನದಿಗೆ ನೀರು ಹರಿಸಲು ಚಾಲನೆ ನೀಡಿದರು.












Click it and Unblock the Notifications