ಚಿತ್ರದುರ್ಗ: ಕೊನೆಗೂ ಬಲೆಗೆ ಬಿದ್ದ ರೈತರಿಗೆ ಆತಂಕ ಸೃಷ್ಟಿಸಿದ್ದ ಚಿರತೆ
ಚಿತ್ರದುರ್ಗ, ನವೆಂಬರ್, 17: ಚಿತ್ರದುರ್ಗ ಜಿಲ್ಲೆಯ ಕಡ್ಲೆಗುದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮದ ಹನುಮಂತಪ್ಪ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಚಿರತೆಯು ಕಳೆದ ಹಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿತ್ತು. ಇದೀಗ ಚಿರತೆ ಸೆರೆಯಿಂದ ಗ್ರಾಮಸ್ಥರಲ್ಲಿ ಆತಂಕ ದೂರವಾಗಿದೆ. ಅರಣ್ಯ ಇಲಾಖೆ ಅಧಿಕಾರಿ ಪ್ರದೀಪ್ ಕೇಸರಿ ನೇತೃತ್ವದಲ್ಲಿ ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಚಿರತೆಯನ್ನು ಶಿಪ್ಟ್ ಮಾಡಿದ್ದಾರೆ.

ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಐವರ ಬಂಧನ: ಜಿಂಕೆ ಮಾಂಸ ಸಾಗಾಣೆ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ರವಿ, ಸಿದ್ದಶೆಟ್ಟಿ, ಸಿದ್ದರಾಜು, ಮಹೇಶ ಹಾಗೂ ಪಂಜನಹಳ್ಳಿ ಗ್ರಾಮದ ಸುರೇಶ ಬಂಧಿತರು. ಆರೋಪಿಗಳು. ಶಿವಪುರ-ಗುಂಡ್ಲುಪೇಟೆ ಮಾರ್ಗದ ಕಲ್ಲುಕಟ್ಟೆ ಡ್ಯಾಂ ಬಳಿ ಮೂರು ಬೈಕ್‍ಗಳಲ್ಲಿ ಬರುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ಐವರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿತರು ಕಡಬೂರು-ಚಿರಕನಹಳ್ಳಿ ಗ್ರಾಮದ ಬಳಿಯ ಕೆರೆಯ ಸಮೀಪ ಜಿಂಕೆಯನ್ನು ಬಂದೂಕಿನಿಂದ ಬೇಟೆಯಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಸುಮಾರು 40 ಕೆ.ಜಿ ಜಿಂಕೆ ಮಾಂಸ, ಒಂಟಿ ನಳಿಕೆ ನಾಡ ಬಂದೂಕು, ಕತ್ತಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಗುಂಡ್ಲುಪೇಟೆ ಬಫರ್‍ನ್ ವಲಯದಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂತರ ಜಿಂಕೆಯ ಮಾಂಸವನ್ನು ನಿಯಮಾನುಸಾರ ವಿಲೇ ಮಾಡಲಾಗಿದೆ.
ಹಸಿರಿನ ವನಸಿರಿಗೆ ಸದಾ ಮಂಜು ಮುಸುಕಿ ದೃಶ್ಯ ಕಾವ್ಯವನ್ನೇ ಸೃಷ್ಟಿಸುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿದೆ. ಇಲ್ಲಿನ ಗೋಪಾಲಸ್ವಾಮಿಗೆ ಅಪಾರ ಭಕ್ತರಿದ್ದಾರೆ. ವಾರಾಂತ್ಯ ಬಂತೆಂದರೆ ಸಾಕು ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರಲಿದೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಬೆಟ್ಟವಿದ್ದು, ಇಲ್ಲಿರುವ ಹುಲಿ, ಚಿರತೆ, ಕರಡಿ, ಆನೆಗಳು ಪ್ರವಾಸಿಗರಿಗೆ ದರ್ಶನ ಕೊಡುತ್ತಲೇ ಇರುತ್ತಿರುತ್ತವೆ.
ಅಂದಹಾಗೆ ಕೆಲ ದಿನಗಳ ಹಿಂದೆಯಷ್ಟೇ ಜೋಡಿ ಚಿರತೆಗಳು ದರ್ಶನ ಕೊಟ್ಟಿದ್ದು, ಒಂದು ಚಿರತೆ ಹಿಂದೆಯೇ ಬೇರೆ ಕಡೆ ಹೊರಟರೆ, ಒಂದಂತೂ ಯಾವುದೇ ಅಳುಕಿಲ್ಲದೇ ತಾನೇ ಇಲ್ಲಿನ ರಾಜ ಎಂಬಂತೆ ನಡೆದುಬಂದಿದೆ. ಹತ್ತಿತ-ಹತ್ತಿರ ಇನ್ನೂ ಹತ್ತಿರ ಎಂಬಂತೆ ಕೆಲವೇ ಮೀಟರ್‌ಗಳ ಅಂತರಕ್ಕೆ ಬಂದ ಚಿರತೆ ರಸ್ತೆ ತಡೆಗೋಡಿ ಏರಿ ಮಾಯವಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಚಳಿಯಲ್ಲಿ ಓಡಾಡಿದ ಬೆಟ್ಟದ ಹುಲಿ: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನದವರೆಗೂ ದಟ್ಟ ಮಂಜು ತಂಪು ತಂಪು ವಾತಾವರಣ ಕವಿದಿರುತ್ತದೆ. ಇದರ ನಡುವೆಯೇ ಬೆಟ್ಟದಲ್ಲಿ ಹುಲಿರಾಯ ಆಗಾಗ ದರ್ಶನ ನೀಡುತ್ತಿದ್ದು, ಇದರಿಂದ ಪ್ರವಾಸಿಗರು, ಭಕ್ತರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುಮುತ್ತಲಿನ ಕಾಡಿನಲ್ಲಿ ಆಗಾಗ ಹುಲಿಯೊಂದು ಕಾಣಿಸಿಕೊಳ್ಳುತ್ತಿದೆ. ಹೀಗೆ ಪ್ರವಾಸಿಗರ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಬೆಟ್ಟದ ಹುಲಿ ಅಂತಲೇ ಕರೆಸಿಕೊಳ್ಳುತ್ತಿವೆ.
ಒಟ್ಟಿನಲ್ಲಿ ದಟ್ಟ ಮಂಜಿನ ಆನಂದ ಅನುಭವಿಸುತ್ತಿದ್ದ ಪ್ರವಾಸಿಗರು ಈಗ ಬೆಟ್ಟದ ಹುಲಿಯನ್ನು ಕಂಡು ಖುಷಿಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಈ ಮೂಲಕ ಈ ವಿಡಿಯೋಗಳು ಸಖತ್ ಟ್ರೆಂಡ್ ಆಗಿಬಿಟ್ಟಿವೆ.












Click it and Unblock the Notifications