ದಿವಂಗತ ಮಾಜಿ ಸಚಿವ ಕೆ.ಎಚ್.ರಂಗನಾಥ್ ಅವರ ಮೊಮ್ಮಗ ನಿಧನ
ಚಿತ್ರದುರ್ಗ, ಫೆಬ್ರವರಿ, 02: ಜಿಲ್ಲೆಯ ಮಾಜಿ ಸಚಿವ ದಿವಂಗತ ಕೆ.ಎಚ್.ರಂಗನಾಥ್ ಅವರ ಮೊಮ್ಮಗ ಹರ್ಷವರ್ಧನ (33) ಶುಕ್ರವಾರ (ಫೆಬ್ರವರಿ 02) ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಕಾಲಿಕವಾಗಿ ನಿಧನರಾದರು.
ಹರ್ಷವರ್ಧನ ಅವರು ತಂದೆ ಕೆಪಿಸಿಸಿ ಸದಸ್ಯ ವಿಜಯಕುಮಾರ್, ತಾಯಿಯನ್ನು ಅಗಲಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಸಮೀಪದ ಕಸವನಹಳ್ಳಿ ಗ್ರಾಮದಲ್ಲಿರುವ ಕೆ.ಎಚ್.ರಂಗನಾಥ್ ಅವರ ಸಮಾಧಿ ಬಳಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಎಚ್.ರಂಗನಾಥ್ ಅವರ ಕುಟುಂಬದ ಕುಡಿ, ಕೆಪಿಸಿಸಿ ಸದಸ್ಯ ವಿಜಯಕುಮಾರ್ ಅವರ ಏಕೈಕ ಪುತ್ರ ಹರ್ಷವರ್ಧನ್ ನಿಧನ ಆಘಾತವನ್ನು ಉಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ದೇಶದಲ್ಲಿ ಸೇವೆ ಮಾಡುವ ಸಂಕಲ್ಪ ಕೊಟ್ಟಿದ್ದ ಹರ್ಷವರ್ಧನ್, ಚಿಕ್ಕ ವಯಸ್ಸಿನಲ್ಲಿಯೇ ಸೇವಾ ಕಾರ್ಯದ ಮೂಲಕ ಜನಾನುರಾಗಿಯಾಗಿದ್ದರು.
ಇನ್ನೂ ಬಾಳಿ ಬದುಕಬೇಕಿದ್ದ ಹರ್ಷವರ್ಧನ್ ಅಕಾಲಿಕ ನಿಧನ ಅತ್ಯಂತ ನೋವು ತರಿಸಿದೆ. ಹರ್ಷವರ್ಧನ ಅವರ ನಿಧನದಿಂದ ನೊಂದಿರುವ ಕುಟುಂಬ ವರ್ಗಕ್ಕೆ ದುಖಃವನ್ನು ಭರಿಸುವ ಶಕ್ತಿ ಬುದ್ಧ, ಬಸವರು ನೀಡಲೆಂದು ಪ್ರಾರ್ಥಿಸಿದ್ದಾರೆ.












Click it and Unblock the Notifications