ಚಿತ್ರದುರ್ಗ : ಹಿರಿಯೂರು ಕ್ಷೇತ್ರದ ಸಮಸ್ಯೆಗಳು
Recommended Video

ಚಿತ್ರದುರ್ಗ, ಏಪ್ರಿಲ್ 23 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಬಿಸಿಲಿನ ಕಾವಿನ ಜೊತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಾದರೆ ಹಿರಿಯೂರು ಕ್ಷೇತ್ರದ ಸಮಸ್ಯೆ ಏನು?.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಅವರು ಕ್ಷೇತ್ರದ ಸಮಸ್ಯೆಗಳೇನು? ಎಂಬುದನ್ನು ಹೇಳಿದ್ದಾರೆ. 'ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹಿರಿಯೂರು ಕ್ಷೇತ್ರಕ್ಕೆ ನೀರಿನ ಸಮಸ್ಯೆ ಎದುರಾಗಿದೆ' ಎಂದು ಅವರು ಆರೋಪಿಸಿದ್ದಾರೆ.
'ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹೆಸರುವಾಸಿಯಾದ ತಾಲೂಕು ಹಿರಿಯೂರು. 1906ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಇಲ್ಲಿ ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದರು. ಆದರೆ, ಇಲ್ಲಿನ ರಾಜಕಾರಣಿಗಳ ದೂರದೃಷ್ಟಿಯ ಕೊರತೆಯಿಂದಾಗಿ ಜಲಾಶಯ ಬರಿದಾಗಿದೆ. ಇದನ್ನು ತುಂಬಿಸುವ ಕೆಲಸವನ್ನು ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.

'ಹಿರಿಯೂರಿಗೆ ಬರಬೇಕಾದ ನೀರು ದಾವಣಗೆರೆ, ತುಮಕೂರು ಪಾಲಾಯಿತು. ವಾಣಿವಿಲಾಸ ಸಾಗರದಲ್ಲಿ 30 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಆದರೆ, ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಕೇವಲ 2 ಟಿಎಂಸಿ ನೀರು ನೀಡಲಾಗಿದೆ' ಎಂದು ದೂರಿದರು.
'2 ಟಿಎಂಸಿ ನೀರು ಹಿರಿಯೂರು, ಚಿತ್ರದುರ್ಗ ನಗರ, ಚಳ್ಳಕೆರೆ, ಚಳ್ಳಕೆರೆಯ ಸಂಶೋಧನಾ ಕ್ಷೇತ್ರಕ್ಕೆ ಸಾಕಾಗುತ್ತದೆ. ಕೃಷಿಗೆ ನೀರು ಲಭ್ಯವಾಗುವುದಿಲ್ಲ. ಕ್ಷೇತ್ರದಲ್ಲಿ 1300 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುವುದಿಲ್ಲ. ಆದ್ದರಿಂದ, ರೈತ ಕಂಗಾಲಾಗಿದ್ದಾನೆ' ಎಂದು ಕಸವನಹಳ್ಳಿ ರಮೇಶ್ ಆತಂಕ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖನೆಗೆ ಬೀಗ : ರೈತರಿಗೆ ಉಪಯೋಗವಾಗಲಿ, ತಾಲೂಕಿನ ಜನರಿಗೆ ಕೆಲಸ ಸಿಗಲಿ ಎಂದು ಹಿರಿಯೂರಿನಲ್ಲಿ ಸಕ್ಕತೆ ಕಾರ್ಖನೆ ನಿರ್ಮಾಣ ಮಾಡಲಾಗಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಅದು ಮುಚ್ಚಿ ಹೋಗಿದೆ. ಅದನ್ನು ಪುನಃ ಆರಂಭಿಸಿರುವ ಇಚ್ಛಾಶಕ್ತಿಯನ್ನು ಯಾರೂ ತೋರಿಸಿಲ್ಲ.

ಧರ್ಮಪುರವನ್ನು ತಾಲೂಕು ಕೇಂದ್ರವಾಗಿ ಮಾಡುವುದು. ಹಿರಿಯೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಸುಸಜ್ಜಿತವಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿಯನ್ನು ಕ್ಷೇತ್ರ ಕಾಣಬೇಕಾಗಿದೆ.
2018ರ ಚುನಾವಣೆಗೆ ಕಾಂಗ್ರೆಸ್‌ನಿಂದ ಡಿ.ಸುಧಾಕರ್, ಜೆಡಿಎಸ್‌ನಿಂದ ಯಶೋಧರ್ ಮತ್ತು ಬಿಜೆಪಿಯಿಂದ ಪೂರ್ಣಿಮಾ ಶ್ರೀನಿವಾಸ್ ಅವರು ಕಣದಲ್ಲಿದ್ದಾರೆ. ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡುತ್ತಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications