ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸಕ್ಕಿಂತ ಲೂಟಿ ಮಾಡಿದ್ದೇ ಹೆಚ್ಚು: ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಚಿತ್ರದುರ್ಗ, ಏಪ್ರಿಲ್, 26: ರಾಜ್ಯ ವಿಧಾನಸಭೆ ಚುನವಾಣೆ ಹಿನ್ನೆಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಇಂದು ಹಿರಿಯೂರಿಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿರುವುದಕ್ಕಿಂತ ಲೂಟಿ ಮಾಡಿದ್ದೆ ಹೆಚ್ಚು ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗುತ್ತಿಗೆದಾರರಿಂದ 40% ಕಮಿಷನ್ ಪಡೆದಿರುವ ಭ್ರಷ್ಟಾಚಾರ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನಾವು ಘೋಷಿಸಿರುವ ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು, ನಾನು ನುಡಿದಂತೆ ನಡೆಯುತ್ತೇವೆ ಎಂದರು. ಅಲ್ಲದೆ ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಕರ್ನಾಟಕದಲ್ಲಿ ನಡೆಯುವ ಈ ವಿಧಾನಸಭಾ ಚುನಾವಣೆ ದೇಶದ ಭವಿಷ್ಯಕ್ಕೆ ಮುನ್ನುಡಿ ಆಗಬೇಕು ಎಂದರು.
ಕಳೆದ ಮೂರುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಹೀನಸ್ಥಿತಿ ತಲುಪಿದೆ. ಇದು ನಿಮಗೆಲ್ಲ ಗೊತ್ತಿದೆ. ಬಿಜೆಪಿಯವರು ರಾಜ್ಯದಲ್ಲಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ನಿಮಗೆ ಉದ್ಯೋಗ ಸಿಕ್ಕಿದೆಯಾ? ಎಂದು ಪ್ರಶ್ನಿಸಿದರು. ಇದ್ದ ಉದ್ಯೋಗವನ್ನೇ ಕಳೆದುಕೊಂಡು ಜನರು ಬೀದಿ ಪಾಲಾಗಿದ್ದಾರೆ. ನಿಮಗೆ ಕಷ್ಟಗಳ ಕೊಡುಗೆ ನೀಡಿರುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಸರ್ಕಾರ ಕೆಲಸ ಮಾಡಿದ್ದಕ್ಕಿಂತ ಲೂಟಿ ಹೊಡೆದಿದ್ದೆ ಹೆಚ್ಚು. ಇಂತಹ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕಾ? ಎಂದು ಪ್ರಶ್ನಿಸಿದರು.
ಹಾಗಾಗಿ ಈ ಬಾರಿ ರಾಜ್ಯದಲ್ಲಿ ಸಂಪೂರ್ಣ ಬಹುಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಾವು ಅಧಿಕಾರಕ್ಕೆ ಬಂದ ಕೂಡಲೇ ನೀಡಿರುವ ಎಲ್ಲ ಭರವಸೆಗಳನ್ನು ಜಾರಿಗೆ ತರುತ್ತೇವೆ. ಹಿರಿಯೂರು ವಿಧಾನಸಭಾ ಕ್ಷೇತ್ರ ಸೇರಿದಂತೆ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಪ್ರಿಯಾಂಕಾ ಗಾಂಧಿ ಮತದಾರರಿಗೆ ಮನವಿ ಮಾಡಿದರು.
ಕಾಡುಗೊಲ್ಲರ ಕಡೆಗಣನೆ
ಇನ್ನು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ರೋಡ್ ಶೋ ನಡೆಸಿದರು. ನಂತರ ವೇದಿಕೆ ಕಾರ್ಯಕ್ರದಲ್ಲಿ ಪ್ರಿಯಾಂಕ ಗಾಂಧಿ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಕಾಡುಗೊಲ್ಲರಿಗೆ ಮಾನ್ಯತೆ ನೀಡದೇ ಅವಮಾನ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.
ಇಂದು ಹಿರಿಯೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಡುಗೊಲ್ಲ ಸಮುದಾಯದವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಡುಗೊಲ್ಲರಿಗೆ ಅವಕಾಶ ನೀಡಿದೇ ಇತರೇ ಸಮುದಾಯದ ಮುಖಂಡರು ವೇದಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಕಾಡುಗೊಲ್ಲರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ವೇದಿಕೆಯಲ್ಲಿ ಕಾಡುಗೊಲ್ಲರನ್ನು ಕಡೆಗಣಿಸಿ, ಇತರೇ ಸಮುದಾಯದ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಹೆಸರಿನಲ್ಲಿ ಮತ ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.












Click it and Unblock the Notifications