'ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಅಭಿವೃದ್ಧಿಯಾಗಿದೆ?'

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ), ಡಿಸೆಂಬರ್ 27 : ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಚುನಾವಣೆ ಪ್ರಚಾರವೂ ಸೇರಿದಂತೆ ಅನೇಕ ಸಲ ಇಲ್ಲಿಗೆ ಬಂದಿದ್ದೇನೆ. ಬಳ್ಳಾರಿ ಪಾದಯಾತ್ರೆ ವೇಳೆ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಆರು ನೂರು ಕೋಟಿ ರುಪಾಯಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದೇನೆ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಚಳ್ಳಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ ನಂತರ ಮಾತನಾಡಿ, ಚಳಕ್ಕೆರೆಗೆ ಎರಡೂವರೆ ಸಾವಿರ ಕೋಟಿ ರುಪಾಯಿ ಅನುದಾನ ತಂದಿದ್ದರೆ ಇದಕ್ಕೆ ಕಾರಣಕರ್ತರು ರಘುಮೂರ್ತಿ. ಯಾವ ಶಾಸಕರು ಜನರ ಪರ- ಅಭಿವೃದ್ಧಿ ಪರ ಇರುತ್ತಾರೋ ಅಂಥವರು ಇಂತಹ ದೊಡ್ಡ ಮಟ್ಟದ ಅನುದಾನ ತರಲು ಸಾಧ್ಯ. ರಘುಮೂರ್ತಿ ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ಹೇಳಿದರು.

ನಾನು ಬಳ್ಳಾರಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಮೂರು ದಿನ ಚಳ್ಳಕೆರೆಯಲ್ಲಿ ಉಳಿದಿದ್ದೆ. ಆಗ ಚಳ್ಳಕೆರೆಯನ್ನು ಹತ್ತಿರದಿಂದ ನೋಡಿದ್ದೆ. ಆಗ ನೋಡಿದ್ದಕ್ಕೂ ಈಗಿನ ಸಂದರ್ಭಕ್ಕೂ ಬಹಳ ಬದಲಾಗಿದೆ. ನಾಲ್ಕೂವರೆ ವರ್ಷದಲ್ಲಿ ಚಿತ್ರಣವೇ ಬದಲಾಗಿದೆ. ನಾನು ಮುಖ್ಯಮಂತ್ರಿಯಾಗಿ ನನ್ನ ಕ್ಷೇತ್ರಕ್ಕೆ ಇಷ್ಟು ಅನುದಾನ ಕೊಡಲು ಆಗಲಿಲ್ಲ ಎಂದರು.

ಐವತ್ತು ಸಾವಿರ ಮತದ ಅಂತರದಿಂದ ಗೆಲ್ಲಿಸಿ

ಐವತ್ತು ಸಾವಿರ ಮತದ ಅಂತರದಿಂದ ಗೆಲ್ಲಿಸಿ

ರಘುಮೂರ್ತಿ ಮಂತ್ರಿ ಆಗದೆಯೂ ಅಪಾರ ಪ್ರಮಾಣದಲ್ಲಿ ಅನುದಾನ ತಂದಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಅಂದರೆ ರಘುಮೂರ್ತಿ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಬೇಕು. ಕಳೆದ ಸಲ ಇಪ್ಪತ್ಮೂರು ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಕನಿಷ್ಠ ಐವತ್ತು ಸಾವಿರ ಮತದ ಅಂತರದಿಂದ ನೀವು ಗೆಲ್ಲಿಸಬೇಕು ಎಂದು ಹೇಳಿದರು.

1400 ಕೋಟಿ ರುಪಾಯಿ ಅಭಿವೃದ್ಧಿ ಕೆಲಸ

1400 ಕೋಟಿ ರುಪಾಯಿ ಅಭಿವೃದ್ಧಿ ಕೆಲಸ

ಸುಳ್ಳು ಹೇಳಿಕೊಂಡು, ಡೋಂಗಿತನ ಮಾಡಿಕೊಂಡು ಓಡಾಡುವವರಿಗೆ ಮತ ಹಾಕಬೇಡಿ. ಡಿಸೆಂಬರ್ ಹನ್ನೆರಡನೇ ತಾರೀಕು ಬೆಂಗಳೂರು ಬಿಟ್ಟಿದ್ದು, ರಾಜ್ಯದ ಎಲ್ಲ ಜಿಲ್ಲೆಗೂ ಭೇಟಿ ಕೊಡುತ್ತಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಕೋಟಿ ರುಪಾಯಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇವತ್ತು ಚಿತ್ರದುರ್ಗದಲ್ಲಿ ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ಈ ಮೂರು ಕ್ಷೇತ್ರ ಸೇರಿ 1400 ಕೋಟಿ ರುಪಾಯಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿದೆ ಎಂದರು.

ಐದು ಜನ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದೀನಿ

ಐದು ಜನ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದೀನಿ

ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಯಾವುದಾದರೂ ಸರಕಾರ ನುಡಿದಂತೆ ನಡೆದುಕೊಂಡಿದ್ದರೆ ಅದು ನಿಮ್ಮ ಸರಕಾರ, ನಮ್ಮ ಸರಕಾರ. ಐದು ಜನ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದೀನಿ. ಇನ್ನೇನು ಹದಿಮೂರನೇ ಬಜೆಟ್ ಮಂಡಿಸಲಿದ್ದೇನೆ. ಪ್ರಣಾಳಿಕೆಯಲ್ಲಿ ನೀಡಿದ್ದ ನೂರಾ ಅರವತ್ತೈದು ಭರವಸೆಗಳಲ್ಲಿ ನೂರಾ ಐವತ್ತೈದು ಈಡೇರಿಸಿದ್ದೇವೆ ಎಂದರು.

ದೇಶದ ಯಾವ ಸರಕಾರ ಇಂಥ ಕೆಲಸ ಮಾಡಿದೆ

ದೇಶದ ಯಾವ ಸರಕಾರ ಇಂಥ ಕೆಲಸ ಮಾಡಿದೆ

ಯಡಿಯೂರಪ್ಪನವರು ದೊಂಬರಾಟ ಮಾಡಿಕೊಂಡು ಓಡಾಡುತ್ತಿದ್ದಾರಲ್ಲಾ, ತುತ್ತೂರಿ ಊದಿಕೊಂಡು ತಿರುಗಾಡುತ್ತಿದ್ದಾರಲ್ಲಾ, ಹತ್ತೊಂಬತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ ಅಂತಾರೆ. ಬಿಜೆಪಿಯ ಯಾವುದಾದರೂ ರಾಜ್ಯದಲ್ಲಿ ಉಚಿತ ಅಕ್ಕಿ ಕೊಡುವ ಯೋಜನೆ ಇದೆ ಅಂತ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಮಕ್ಕಳಿಗೆ ಉಚಿತವಾಗಿ ಹಾಲು ಕೊಡುವ ಯೋಜನೆ

ಮಕ್ಕಳಿಗೆ ಉಚಿತವಾಗಿ ಹಾಲು ಕೊಡುವ ಯೋಜನೆ

ಇಡೀ ದೇಶದಲ್ಲಿ ಮಕ್ಕಳಿಗೆ ಉಚಿತವಾಗಿ ಹಾಲು ಕೊಡುವ ಯೋಜನೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ವಿವಿಧ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿದ್ದರು. ಅವರ ಅಸಲು- ಬಡ್ಡಿ ಸಹಿತ ಮನ್ನಾ ಮಾಡಿ ಸಾಲಮುಕ್ತರನ್ನಾಗಿ ಮಾಡಿದ್ದೇವೆ. ಈ ಹಿಂದಿನ ಯಾವ ಸರಕಾರವಾದರೂ ಇಂತಹ ಕೆಲಸ ಮಾಡಿತ್ತಾ ಎಂದು ಪ್ರಶ್ನೆ ಮಾಡಿದರು.

ರೈತರ ಆದಾಯ ಶೇ ಮೂವತ್ತೆಂಟರಷ್ಟು ಹೆಚ್ಚಾಗಿದೆ

ರೈತರ ಆದಾಯ ಶೇ ಮೂವತ್ತೆಂಟರಷ್ಟು ಹೆಚ್ಚಾಗಿದೆ

ರೈತರಿಗೆ ಆನ್ ಲೈನ್ ವ್ಯವಸ್ಥೆಯಲ್ಲಿ ಪಾವತಿ ಮಾಡುವುದರಿಂದ ಅವರ ಆದಾಯ ಶೇ ಮೂವತ್ತೆಂಟರಷ್ಟು ಹೆಚ್ಚಾಗಿದೆ. ಇನ್ನು ಇಡೀ ಜಿಲ್ಲೆಯಲ್ಲಿ ಹಾಸ್ಟೆಲ್ ಗಳು, ಮೊರಾರ್ಜಿ ದೇಸಾಯಿ ಶಾಲೆಗಳು ಆರಂಭಿಸಿದ್ದೇವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಯೋಜನೆ ಜಾರಿಗೆ ಬಂದಿದ್ದೇ ನನ್ನಿಂದ. ಈಗ ಎಲ್ಲ ಹೋಬಳಿಗಳಲ್ಲೂ ವಸತಿ ಶಾಲೆ ಆರಂಭಿಸಿದ ಸರಕಾರ ನಮ್ಮದು ಎಂದು ಹೇಳಿದರು.

ದಲಿತರಿಗೆ ಗುತ್ತಿಗೆ ಮೀಸಲಾತಿ

ದಲಿತರಿಗೆ ಗುತ್ತಿಗೆ ಮೀಸಲಾತಿ

ದಲಿತರಿಗೆ ಗುತ್ತಿಗೆ ಪಡೆಯಲು ಮೀಸಲಾತಿ ಇರಬೇಕು ಅಂತ ಯಾವುದಾದರೂ ಸರಕಾರ ಕಾನೂನು ಮಾಡಿದ್ದರೆ ಅದು ನಮ್ಮ ಸರಕಾರ, ಕಾಂಗ್ರೆಸ್ ಸರಕಾರ. ಎಲ್ಲ ಹಟ್ಟಿ, ಹಾಡಿಗಳಲ್ಲಿ ವಾಸಿಸುವವರಿಗೆ ಒಡೆತನ ಎಂಬ ವಿಶೇಷ ಕಾನೂನು ಮಾಡಿದ್ದೇವೆ. ಇದೇನೂ ಮಾಡದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಕಾರಜೋಳ, ರೇಣುಕಾಚಾರ್ಯ ಬಿಜೆಪಿ ನಡಿಗೆ ದಲಿತರ ಮನೆಗೆ ಅಂತ ಮಾಡ್ತಾರೆ. ಚುನಾವಣೆ ಬಂದಿದೆಯಲ್ಲಾ ಅಂತ ನಾಟಕ ಮಾಡ್ತಾರೆ. ಹೋಟೆಲ್ ಗಳಿಂದ ತಿಂಡಿ ತಂದು ತಿಂದು ದಲಿತರ ಪರ ಅಂತೀರಲ್ಲಾ ನಾಚಿಕೆ ಆಗಲ್ವ ಎಂದು ಪ್ರಶ್ನಿಸಿದರು.

ನಿಮ್ಮಲ್ಲಿ ಬದಲಾವಣೆ ಆಗಬೇಕು

ನಿಮ್ಮಲ್ಲಿ ಬದಲಾವಣೆ ಆಗಬೇಕು

ಈಗ ಪರಿವರ್ತನೆ ಅಂತ ಹೊರಟಿದ್ದಾರೆ. ಸಮಾಜದಲ್ಲಿ ಆಗಬೇಕಾದ್ದು ಪರಿವರ್ತನೆಯಲ್ಲ. ಜಾತಿ ಜಾತಿಗಳ ಮಧ್ಯೆ ಬೆಂಕಿ ಇಡುವಂಥ ನಿಮ್ಮಂಥ ಕೋಮುವಾದಿಗಳಲ್ಲಿ ಬದಲಾವಣೆ ಆಗಬೇಕು. ಯಡಿಯೂರಪ್ಪ, ಶೋಭ ಕರಂದ್ಲಾಜೆ, ಈಶ್ವರಪ್ಪ, ಪ್ರತಾಪ ಸಿಂಹ, ಅನಂತಕುಮಾರ್ ಹೆಗಡೆ ಅವರಲ್ಲಿ ಬದಲಾವಣೆ ಆಗಬೇಕು ಎಂದರು.

ರೈತರಿಗೆ ಯಾರು ಸುಳ್ಳು ಹೇಳ್ತಾರೆ ಗೊತ್ತಾಗಲ್ವಾ?

ರೈತರಿಗೆ ಯಾರು ಸುಳ್ಳು ಹೇಳ್ತಾರೆ ಗೊತ್ತಾಗಲ್ವಾ?

ಮಹಾದಾಯಿ ನೀರು ಹರಿಸುತ್ತೀವಿ ಎಂದು ಸುಳ್ಳು ಹೇಳಿದರು. ಅವರು ತಿರುಗಿ ಬಿದ್ದಾಗ ನಾವು ಎತ್ತಿ ಕಟ್ಟಿದೆವು ಎಂದರು. ರೈತರಿಗೆ ಗೊತ್ತಾಗಲ್ವಾ? ನೀವು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದೀರಿ. ಅದಕ್ಕೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಇವತ್ತು ಬಂದ್, ಪಾದಯಾತ್ರೆ ಮಾಡ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ಯಾಮಾರಿಸುವುದಕ್ಕೆ ಯಡಿಯೂರಪ್ಪನವರಿಗೆ ಸಾಧ್ಯವಿಲ್ಲ. ಯಡಿಯೂರಪ್ಪಗೆ ಎರಡು ನಾಲಗೆ, ಎರಡು ಮುಖ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+