ವದ್ದಿಕೆರೆ ಸಿದ್ದೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ: ಕಳೆದ ಬಾರಿಗಿಂತ ಅತೀ ಕಡಿಮೆ ಹಣ ಸಂಗ್ರಹ
ಚಿತ್ರದುರ್ಗ, ಸೆಪ್ಟೆಂಬರ್, 13: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರೀ ಕ್ಷೇತ್ರ ವದ್ದಿಕೆರೆ ಶ್ರೀ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರ ಸ್ವಾಮಿಯ ಹುಂಡಿ ಹಣ ಎಣಿಕೆ ಆಗಿದ್ದು, 96,32,630 ರೂಪಾಯಿ ಕಾಣಿಕೆ ಹುಂಡಿ ಸಂಗ್ರಹ ಆಗಿದೆ. ಕಳೆದ ಬಾರಿಗಿಂತ ಈ ಬಾರಿ ಹುಂಡಿ ಹಣ ಸಂಗ್ರಹಣೆಯಲ್ಲಿ ಎಷ್ಟು ಕಡಿಮೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಧಿಸೂಚಿತ "ಎ" ಪ್ರವರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ಯಾನೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್ ಸಮ್ಮುಖದಲ್ಲಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಗಳ ಹಣವನ್ನು ಎಣಿಕೆ ಮಾಡಲಾಗಿದೆ.

ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ತೆರೆದಿರುವ ಉಳಿತಾಯ ಖಾತೆಗಳಿಗೆ ಸಮನಾಗಿ 1) ಕೆನರಾ ಬ್ಯಾಂಕ್ ಐಮಂಗಲ ಶಾಖೆ ಹಾಗೂ 2) ಪ್ರಗತಿ ಕೃಷ್ಣ ಬ್ಯಾಂಕ್ ಯರಬಳ್ಳಿ ಶಾಖೆಗೆ ಬ್ಯಾಂಕ್‌ನಲ್ಲಿ ಇಡಲಾಗಿದೆ. ಇನ್ನು ಕಳೆದ 2023, ಸೆಪ್ಟೆಂಬರ್ 27ರಂದು ರಂದು ನಡೆದ ಹುಂಡಿ ಎಣಿಕೆ ವೇಳೆ ಪ್ರಥಮ ಬಾರಿಗೆ ದಾಖಲೆ ಮೊತ್ತದ 1,24,67,800 ರೂಪಾಯಿ (ಒಂದು ಕೋಟಿ 24 ಲಕ್ಷದ 67 ಸಾವಿರದ 800 ರೂಪಾಯಿ) ಹಣ ಸಂಗ್ರಹವಾಗಿತ್ತು.
ಅಂದಿನ ಹುಂಡಿ ಎಣೆಕೆ ಸಂದರ್ಭದಲ್ಲಿ ವಿದೇಶಿ ಕರೆನ್ಸಿಗಳು ಸೇರಿದಂತೆ, ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಬಂಗಾರ ಮತ್ತು ಬೆಳ್ಳಿ ಆಭರಣಗಳು ಸಹ ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿತವಾಗಿದ್ದವು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಎಂ.ಕಾರ್ತಿಕ್, ತಹಶೀಲ್ದಾರ್ ರಾಜೇಶ್ ಕುಮಾರ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಹಿರಿಯೂರು ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ವದ್ದಿಕೆರೆ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.
1.76 ಕೋಟಿ ರೂಪಾಯಿ ಸಂಗ್ರಹ: ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ (ಆಗಸ್ಟ್ 29) ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಕೇವಲ ಒಂದು ತಿಂಗಳ ಅವಧಿಯಲ್ಲಿ 1.76 ಕೋಟಿ ರೂಪಾಯಿ ಸಂಗ್ರಹವಾಗಿದೆ. ಹಾಗಾದರೆ ಎಷ್ಟು ವಿದೇಶಿ ಕರೆನ್ಸಿ ಪತ್ತೆಯಾಗಿವೆ ಎನ್ನಿವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ಸಂಜೆ 4:30 ಗಂಟೆಯವರೆಗೂ ನಡೆಯಿತು.
ಭೀಮನ ಅಮಾವಾಸ್ಯೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು , ಈ ವೇಳೆ ಹರಕೆಯ ರೂಪದಲ್ಲಿ 1,76,29,849 ನಗದು 45 ಗ್ರಾಂ ಚಿನ್ನ ಹಾಗೂ 1.300 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ಈ ಹುಂಡಿಯಿಂದ 2,96,469 ರೂಪಾಯಿ ಮೌಲ್ಯದ ಬೇರೆ ದೇಶದ ಕರೆನ್ಸಿಗಳು ಪತ್ತೆಯಾಗಿವೆ. 20 ಯುಎಸ್‌ಎ ಡಾಲರ್, ಥಾಯ್ಲ್ಯಾಂಡ್ 1 ಒಂದು, ಶ್ರೀಲಂಕಾ 2, ಅರಬ್ 3 ನೋಟು ಸೇರಿದಂತೆ ಇತರ ದೇಶಗಳ ನೋಟುಗಳನಗನು ಹುಂಡಿಗೆ ಹಾಕಿದ್ದಾರೆ. ಅಲ್ಲದೆ, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 11 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ.
ಈ ವೇಳೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾ ಅಧೀಕ್ಷಕ ನಾಗೇಶ್, ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆಯ ಭಾರತಿ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.












Click it and Unblock the Notifications