ಇತಿಹಾಸ ಪ್ರಸಿದ್ಧ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಗೆ ಕೇವಲ 2 ಅಡಿ ಬಾಕಿ ಅಷ್ಟೇ.!-ನೀರಿನ ಮಟ್ಟ ಎಷ್ಟಿದೆ?
Vani Vilasa Sagara Dam: ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯದ ಭರ್ತಿಯಾಗಿ ಕೋಡಿ ಬೀಳಲು ಕೇವಲ 2 ಅಡಿ ನೀರು ಮಾತ್ರ ಬಾಕಿಯಿದೆ. ಹಾಗಾದರೆ ಇದೀಗ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂದು (ನವೆಂಬರ್ 13) ವಾಣಿ ವಿಲಾಸ ಜಲಾಶಯಕ್ಕೆ 1,040 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.90 ಅಡಿ ತಲುಪಿದ್ದು, ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ.

1935 ಹಾಗೂ 2022ರಲ್ಲಿ ಕೋಡಿ ಬಿದ್ದಿದ್ದ ಜಲಾಶಯ ಇದೀಗ ಮೂರನೇ ಬಾರಿಗೆ ಕೋಡಿ ಬೀಳುವತ್ತ ಸಾಗಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಗಾಗಲೇ ಭದ್ರಾ ಜಲಾಶಯದಿಂದ ಪ್ರತಿದಿನ 1,000 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರ ಜೊತೆಗೆ ನಿರಂತರವಾಗಿ ಜಲಾಶಯದ ಮೇಲ್ಭಾಗ ಮಳೆ ಸುರಿದರೆ, ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬೀಳುವ ದಿನ ತುಂಬಾ ದೂರವೇನೂ ಉಳಿದಿಲ್ಲ.
ಜುಲೈ ತಿಂಗಳ ಅಂತ್ಯದಲ್ಲಿ 113.08ರಷ್ಟಿದ್ದ ಜಲಾಶಯದ ನೀರಿನ ಮಟ್ಟ ನವೆಂಬರ್ 13ರ ವೇಳಗೆ 127.90. ಅಡಿ ಮುಟ್ಟಿದೆ. ಕೇವಲ ನಾಲ್ಕು ತಿಂಗಳಿನಲ್ಲಿ ಸುಮಾರು 15 ಅಡಿಯಷ್ಟು ನೀರು ಸಂಗ್ರಹ ಆಗಿದ್ದು, ಇದರಿಂದ ಜಿಲ್ಲೆಯ ಜನರ ನೀರಿನ ಬವಣೆ ನೀಗಿಸಿದಂತಾಗಲಿದೆ.
ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಾಣಿ ವಿಲಾಸ ಸಾಗರ ಜಲಾಶಯವೇ ಆಧಾರಸ್ಥ ಸ್ಥಂಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12,135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907ರಲ್ಲಿ ಜಲಾಶಯ ನಿರ್ಮಿಸಿದರು.
ಜಲಾಶಯದ ನಿರ್ಮಾಣದ ಕಾಲದಲ್ಲಿ ಸಂಪನ್ಮೂಲದ ಕೊರತೆ ಉಂಟಾಗಿದ್ದರಿಂದ ಮಹಾರಾಣಿ ಅವರ ಒಡವೆ ಅಡವಿಟ್ಟು ಹಣ ಹೊಂದಿಸಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎನ್ನಲಾಗಿದೆ. ಮೈಸೂರು ಅರಸರ ದೂರದೃಷ್ಟಿಯ ಆಲೋಚನೆಯಿಂದ ನೂರಾರು ವರ್ಷಗಳಿಂದ ಈ ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಪಡೆದಿವೆ.
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದರೂ, ನೀರುಣಿಸುತ್ತಲೇ ಇರುವ ಜಲಾಶಯವು 129 ಕಿಲೋ ಮೀಟರ್ ಉದ್ದದ ಕಾಲುವೆ ಹೊಂದಿದೆ. ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರೂ ಕೂಡ ಇಂದಿಗೂ ಗಟ್ಟಿ ಮುಟ್ಟಾಗಿದ್ದು, ಇದರ ನಿರ್ಮಾಣಕ್ಕೆ ಕೇವಲ ಕಲ್ಲು ಮತ್ತು ಗಾರೆಯನ್ನು ಮಾತ್ರ ಬಳಸಲಾಗಿದೆ ಎಂಬುದು ಮತ್ತೊಂದು ವಿಶೇಷ.
ಜಲಾಶಯ ನಿರ್ಮಾಣವಾಗಿ 26 ವರ್ಷಗಳ ನಂತರ ಅಂದರೆ, 1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ನಂತರ ಸತತವಾಗಿ 89 ವರ್ಷಗಳ ಕಾಲ ಜಲಾಶಯ ಕೋಡಿ ಬೀಳಲೇ ಇಲ್ಲ. 2022ರ ಸೆಪ್ಟೆಂಬರ್ ತಿಂಗಳಿನಲ್ಲಿ 89 ವರ್ಷದ ನಂತರ ಕೋಡಿ ಬಿದ್ದ ಜಲಾಶಯ ಈ ತಲೆಮಾರಿನ ಜನಕ್ಕೆ ಆಶ್ಚರ್ಯ ಮತ್ತು ಅಪರೂಪದ ಚಿತ್ರಣ ಒದಗಿಸಿತ್ತು.
ಇದೀಗ ಕೇವಲ ಅದಾಗಿ ಎರಡೇ ವರ್ಷಕ್ಕೆ ಮತ್ತೆ ಅಂತಹುದೊಂದು ಸುವರ್ಣ ಗಳಿಗೆಗೆ ತಾಲೂಕು ಮತ್ತು ಜಿಲ್ಲೆ ಸಾಕ್ಷಿಯಾಗುವ ಕ್ಷಣಗಳು ಹತ್ತಿರ ಬರುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ನದಿ ಜೊತೆ ಸೇರಿ ವೇದಾವತಿ ನದಿಯಾಗಿ ಹರಿದು ವಿವಿ ಸಾಗರದ ಒಡಲು ಸೇರುತ್ತದೆ.
117 ವರ್ಷಗಳ ಇತಿಹಾಸ ಹೊಂದಿರುವ ಈ ಜಲಾಶಯದ ಎತ್ತರ 135.25 ಅಡಿ ಇದ್ದು, ತಾಲೂಕಿನ ಮೂರನೇ ಒಂದು ಭಾಗದಷ್ಟು ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. 1933ರಲ್ಲಿ 135 ಅಡಿ, 1934ರಲ್ಲಿ 130 ಅಡಿ, 1957ರಲ್ಲಿ 125 ಅಡಿ, 1958ರಲ್ಲಿ 124 ಅಡಿ ನೀರು ಸಂಗ್ರಹ ಕಂಡಿತ್ತು. ನಂತರ 2021ರಲ್ಲಿ 125 ಅಡಿ ತಲುಪಿ 2022ರಲ್ಲಿ ಕೋಡಿ ಬೀಳುವ ಮೂಲಕ 89 ವರ್ಷಗಳ ನಂತರ ಇತಿಹಾಸ ಸೃಷ್ಟಿಸಿತ್ತು.
30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯಕ್ಕೆ ಇನ್ನು ಒಂದೆರಡು ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಸೈಕ್ಲೋನ್ ಮತ್ತು ಅಕಾಲಿಕ ಮಳೆಯಿಂದಲೇ ಸಾಕಷ್ಟು ನೀರು ಹರಿದು ಬಂದಿದೆ. ಇದೀಗ ಕೋಡಿ ಬೀಳುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಜನ ತುದಿಗಾಲಲ್ಲಿ ನಿಂತಿದ್ದು, ಆದಷ್ಟು ಬೇಗ ರೈತರ ಆ ಕನಸು ಈಡೇರಲಿ ಎನ್ನುವುದೇ ನಮ್ಮ ಆಶಯವಾಗಿದೆ.












Click it and Unblock the Notifications