Vani Vilasa Sagara: ವಾಣಿ ವಿಲಾಸ ಜಲಾಶಯದ ಪ್ರಸ್ತುತ ನೀರಿನ ಮಟ್ಟದ ವರದಿ ಇಲ್ಲಿದೆ
ಚಿತ್ರದುರ್ಗ, ಜುಲೈ, 24: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ಹಾಗೆಯೇ ಇದೀಗ ಮಧ್ಯ ಕರ್ನಾಟಕ ಭಾಗದಲ್ಲೂ ಮುಂಗಾರು ಚುರುಕು ಪಡೆದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯದ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
1907ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಗ್ರಾಮದ ಬಳಿ ಕಟ್ಟಿರುವ ಮಾರಿಕಣಿವೆ ಜಲಾಶಯಕ್ಕೆ ಯಾವುದೇ ಒಳಹರಿವು ದಾಖಲಾಗಿಲ್ಲ. ಪ್ರಸ್ತುತ ಜಲಾಶಯದ ನೀರಿನ ಮಟ್ಟ ಸೋಮವಾರದ ವರದಿಯಲ್ಲಿ 123.20 ಅಡಿ ಇದೆ. ಇನ್ನೂ ಡ್ಯಾಂಗೆ ಯಾವುದೇ ಒಳಹರಿವು ನೀರು ಹರಿದುಬಂದಿಲ್ಲ. ಹೊರಹರಿವು ಸಹ ಇಲ್ಲದಂತಾಗಿದೆ.

ಕಳೆದ ವರ್ಷ ಜಲಾಶಯದ ಮೇಲ್ಭಾಗದಲ್ಲಿ ಅತಿಹೆಚ್ಚು ಮಳೆ ಬಂದಿದ್ದರಿಂದ ಡ್ಯಾಂಗೆ ಹೆಚ್ಚು ನೀರು ಹರಿದು ಬಂದು 135 ಅಡಿ ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಇನ್ನು ಮಳೆ ನೀರು ಸಂಗ್ರಹವಾಗಿಲ್ಲ. ಕಳೆದ ವರ್ಷದಲ್ಲಿ ಸುಮಾರು ಮೂರು ತಿಂಗಳ ಕಾಲ ಜಲಾಶಯ ಕೋಡಿ ಬಿದ್ದು ಹರಿದಿತ್ತು.
ಕಳೆದ 2022ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರನ್ನು ಹರಿಸಿದ್ದರಿಂದ 30 ಟಿಎಂಸಿ ಮತ್ತು 135 ಅಡಿ ನೀರು ಸಂಗ್ರಹವಾಗಿತ್ತು. 2000ನೇ ಇಸವಿಯಲ್ಲಿ 122.50 ಅಡಿ ತುಂಬಿದ್ದ ಡ್ಯಾಂ ದಾಖಲೆ ಬರೆದಿತ್ತು. 2021ರಲ್ಲಿ 122.75 ಅಡಿಗೆ ಡ್ಯಾಂ ನೀರಿನ ಮಟ್ಟ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು.1958ರಲ್ಲಿ ಡ್ಯಾಂ ನೀರಿನ ಮಟ್ಟ 124.25 ಅಡಿ ದಾಟಿತ್ತು. 1935ರಲ್ಲಿ 135.25 ಅಡಿ ನೀರು ಹರಿದು ಬಂದಿದ್ದರಿಂದ ಮೊದಲ ಬಾರಿಗೆ ಜಲಾಶಯದಲ್ಲಿ ಕೋಡಿ ಬಿದ್ದು ನೀರು ಹರಿದಿತ್ತು.
ತದನಂತರ 1934ರಲ್ಲಿ 130.24 ಅಡಿ, 1957ರಲ್ಲಿ 125.05 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. 2000 ಸಾಲಿನಲ್ಲಿ 122.50 ಅಡಿಗೆ ಮಾತ್ರ ನೀರಿನ ಮಟ್ಟ ತಲುಪಿತ್ತು. 2023ರಲ್ಲಿ ಡ್ಯಾಂ ಭರ್ತಿಯಾಗಿ ಎರಡನೇ ಬಾರಿಗೆ ಕೋಡಿ ಬಿದ್ದು ಮೈದುಂಬಿ ಹರಿದಿತ್ತು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ 1897ರಲ್ಲಿ ಈ ಜಲಾಶಯ ನಿರ್ಮಾಣವನ್ನು ಆರಂಭಿಸಿ, 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದರು.
ಜಿಲ್ಲೆಯಲ್ಲಿ ತುಂತುರು ಮಳೆ
ಮತ್ತೊಂದೆಡೆ ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಮಳೆಯಿಂದ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡಿವೆ. ಹಿರಿಯೂರು ತಾಲೂಕಿನಲ್ಲಿ ಸೋಮವಾರ ಈಶ್ವರಗೆರೆ ಗ್ರಾಮದಲ್ಲಿ 8.8 ಮಿ.ಮೀ. ಮಳೆಯಾಗಿದೆ.
ಇಕ್ಕನೂರು 8.6, ಬಬ್ಬೂರು 7.6, ಹಿರಿಯೂರು 7 ಹಾಗೂ ಸೂಗುರಿನಲ್ಲಿ 2.1 ಮಿಲಿ ಮೀಟರ್ ಬಿದ್ದಿದೆ. ತಾಲೂಕಿನಲ್ಲಿ ಒಟ್ಟು ಸರಾಸರಿ 5.68 ಮಿಲಿ ಮೀಟರ್ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಇಂದು ಕೂಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ತಿಳಿದುಬಂದಿದೆ.












Click it and Unblock the Notifications