ಆರು ವರ್ಷದಿಂದ ಮೇಲೆಳದ ಶ್ರೀಕೃಷ್ಣ ಸಮುದಾಯ ಭವನ:ನೆಲಕಚ್ಚಿದ 3.50 ಕೋಟಿ ವೆಚ್ಚದ ಕಾಮಗಾರಿ
ಚಿತ್ರದುರ್ಗ, ಜುಲೈ 24: ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಅನುದಾನ ನೀಡುತ್ತದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತು ವರ್ಷಗಟ್ಟಲೆ ಕಳೆದರೂ ಸರ್ಕಾರದ ಸೌಲಭ್ಯಗಳು ಸಮುದಾಯದ ಜನರ ಕೈಗೆ ಸಿಗದಿರುವುದು ಮರೀಚಿಕೆಯಾಗಿದೆ.
2018ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಶ್ರೀಕೃಷ್ಣ ಸಮುದಾಯ ಭವನ ಆರು ವರ್ಷ ಕಳೆದರೂ ತಳಪಾಯದಿಂದ ಮೇಲಕ್ಕೆದ್ದೆಳುವಂತೆ ಕಾಣುತ್ತಿಲ್ಲ. ಈ ಬಗ್ಗೆ 'ಒನ್ ಇಂಡಿಯಾ ಕನ್ನಡ' ಭವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಗೊಲ್ಲ ಸಮುದಾಯದ ಜನಸಂಖ್ಯೆ ಹೆಚ್ಚು ಇರುವುದರಿಂದ ಜನಾಂಗದ ಅಭಿವೃದ್ಧಿಗಾಗಿ ಶ್ರೀಕೃಷ್ಣ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರ ಸುಮಾರು 3.50 ಕೋಟಿ ವೆಚ್ಚದಲ್ಲಿ ಶ್ರೀ ಕೃಷ್ಣ ಸಮುದಾಯ ಭವನ ನಿರ್ಮಿಸಲು ಆಡಳಿತಾತ್ಮಕ ಮಂಜೂರು ಮಾಡಲಾಗಿದೆ.
ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಗೊಲ್ಲ ಜನಾಂಗದ ಏಳಿಗೆಗಾಗಿ ನಗರದ ಹುಳಿಯಾರು ರಸ್ತೆಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪಕ್ಕದಲ್ಲಿ ಸುಮಾರು 20 ಗುಂಟೆ ಜಾಗ ಗುರುತಿಸಿ 2018ರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದ್ದರು.

ಸಮುದಾಯ ಭವನ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಆರಂಭಿಸಿದ್ದರು. ಕಾಮಗಾರಿಗೆ 50 ಲಕ್ಷ ಹಣವನ್ನು ಬಿಡುಗಡೆ ಕೂಡ ಮಾಡಲಾಗಿದೆ. ಇದರಲ್ಲಿ 37 ಲಕ್ಷ ಹಣವನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದಿಂದ ಬಿಡುಗಡೆಗೊಂಡು ಭವನದ ತಳಪಾಯ ಕಟ್ಟಡ ಕಾಮಗಾರಿ ಆರಂಭಿಸಿದ್ದರು. ಆದರೆ ಅದ್ಯಾಕೋ ಏನೋ ಗೊತ್ತಿಲ್ಲಾ ಕಾಮಗಾರಿ ಭವನದ ತಳಪಾಯ ಕಟ್ಟಡಕ್ಕೆ ನಿಂತು, ಕಬ್ಬಿಣ ತುಕ್ಕು ಹಿಡಿದು, ತಳಪಾಯದ ಕಟ್ಟಡದಲ್ಲಿ ಸೀಮೆ ಜಾಲಿ ಗಿಡಗಳು ಬೇಳೆ ನಿಂತಿದ್ದು ಕುಡುಕರ ಅಡ್ಡೆಯಾಗಿದೆ.
ಕಾಮಗಾರಿ ಆರಂಭಗೊಂಡು ಐದಾರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರದ ಮಟ್ಟದವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಮುದಾಯ ಭವನ ಪೂರ್ಣಗೊಳ್ಳುವಂತಿಲ್ಲ.

2018ರಲ್ಲಿ ತನ್ನದೇ ಸಮುದಾಯದ ಬಿಜೆಪಿಯಿಂದ ಶಾಸಕರಾಗಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಸಮುದಾಯದ ಭವನಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಿದ್ದರಂತೆ . 3.50 ಕೋಟಿ ರೂ ಹಣದಿಂದ 4 ಕೋಟಿ ರೂ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಂತೆ. ಪೂರ್ಣಿಮಾ ಅವರು ಭವನಕ್ಕೆ 50 ಲಕ್ಷ ರೂ ಹೆಚ್ಚುವರಿ ಹಣ ನೀಡುವಂತೆ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸೇರಿಸಿದ್ದರು ಎನ್ನಲಾಗಿದೆ. ಆದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಹಿಂದಿನ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರ ಬಿಜೆಪಿ ಸರ್ಕಾರವಿತ್ತು. ಮನಸ್ಸು ಮಾಡಿದಿದ್ರೆ ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ಆದರೆ ಅವರು ಗಟ್ಟಿ ಮನಸ್ಸು ಮಾಡಲಿಲ್ಲ ಎಂಬ ಮಾತುಗಳು ಸಮುದಾಯದಿಂದ ಕೇಳಿ ಬರುತ್ತಿವೆ.
ಬಿಡುಗಡೆಯಾಗದ ಹಣ
ಗೊಲ್ಲ ಸಮುದಾಯದ ಶ್ರೀಕೃಷ್ಣ ಸಮುದಾಯ ಭವನ ನಿರ್ಮಾಣಕ್ಕೆ 3.50 ಕೋಟಿ ರೂ ಹಣ ಮಂಜೂರು ಮಾಡಲಾಗಿದೆ. ಈಗಾಗಲೇ 50 ಲಕ್ಷ ರೂ ಹಣವನ್ನು ಸರ್ಕಾರದಿಂದ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಹಣದಲ್ಲಿ ತಳಪಾಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಂತರ ಭವನದ ಕಾಮಗಾರಿಯನ್ನು ಮುಂದುವರಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಲಿಲ್ಲ. ಉಳಿದ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಸಚಿವರು ಅಧಿವೇಶನ ಮುಗಿದ ಬಳಿಕ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕುಸ್ಥಾಪನೆ ಮಾಡಿದ್ದ ಡಿ.ಸುಧಾಕರ್..ಉದ್ಘಾಟನೆ ಮಾಡ್ತಾರಾ?
ಸಚಿವ ಡಿ.ಸುಧಾಕರ್ ಅವರು 2018ರಲ್ಲಿ ಕೊನೆ ಗಳಿಗೆಯಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಆಚರಿಸಿ ಭವನದ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಾದ ಬಳಿಕ ಚುನಾವಣೆಯಲ್ಲಿ ಸೋಲುಂಡಿದ್ದರು. ನಂತರ ಆಯ್ಕೆಯಾಗಿ ಬಂದಿದ್ದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಹೆಚ್ಚು ಗಮನ ಹರಿಸಿಲ್ಲ ಎನ್ನಲಾಗುತ್ತಿದೆ. ಇದೀಗ ಚುನಾವಣೆಯಲ್ಲಿ ಗೆಲುವು ಕಂಡು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ ಸುಧಾಕರ್ ಅವರೇ ಗಮನಹರಿಸಿ ಅರ್ಧಕ್ಕೆ ನಿಂತಿರುವ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎನ್ನುವುದು ಸಮುದಾಯದ ಅಭಿಪ್ರಾಯವಾಗಿದೆ. ತಾವೇ ಶಂಕುಸ್ಥಾಪನೆ ನೆರವೇರಿಸಿ, ಚುನಾವಣೆಯಲ್ಲಿ ಸೋತು ನಂತರ ಗೆಲುವು ಸಾಧಿಸಿ ಸಚಿವರಾಗಿರುವ ಡಿ ಸುಧಾಕರ್ ಅವರು ಅರ್ಧಕ್ಕೆ ನಿಂತಿರುವ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ, ಭವನವನ್ನು ಉದ್ಘಾಟಿಸುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications