ಚಿತ್ರದುರ್ಗದ ಮೊದಲ ಮಹಿಳಾ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆಸ್ತಿ ವಿವರ
ಚಿತ್ರದುರ್ಗ, ಏಪ್ರಿಲ್ 18: ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಸೋಮವಾರ(ಏಪ್ರಿಲ್ 17) ರಂದು ಮರು ಆಯ್ಕೆ ಬಯಸಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಶ್ರೀತೇರು ಮಲ್ಲೇಶ್ವರ ದೇವಾಲಯ, ಕಾಳಿಕಾಂಬಾ ದೇವಿ, ದುರ್ಗಾಪರಮೇಶ್ವರಿ ದೇವಾಲಯ, ಶ್ರೀಕೃಷ್ಣ ದೇವಾಲಯ, ಚರ್ಚ್ ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿ ನಂತರ ನಗರದ ಶ್ರೀತೇರು ಮಲ್ಲೇಶ್ವರ ದೇವಾಲಯದಿಂದ ಸಾವಿರಾರು ಬೆಂಬಲಿಗರ ಜೊತೆ ರೋಡ್ ಶೋ ನಡೆಸಿ, ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ತಮ್ಮ ಆಸ್ತಿಯ ಬಗ್ಗೆ ವಿವರ ನೀಡಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಒಟ್ಟು 63,88,28,157 ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಭ್ಯರ್ಥಿ ಕೆ.ಪೂರ್ಣಿಮಾ ಹೆಸರಲ್ಲಿ ನಗದು 1.75 ಲಕ್ಷ ರೂ, ಬ್ಯಾಂಕ್ ಖಾತೆಗಳಲ್ಲಿ 1.74 ರೂ ಕೋಟಿ, ವಿವಿಧ ಹೂಡಿಕೆಯಲ್ಲಿ ರೂ 1.98 ಕೋಟಿ ಇರುವುದಾಗಿ ತಿಳಿಸಿದ್ದಾರೆ.
ಇನ್ನು 6.67 ಕೋಟಿ ಬರ ಬೇಕಾದ ಸಾಲ ಇರುವ ಬಗ್ಗೆ ವಿವರಿಸಿದ್ದಾರೆ. ಪೂರ್ಣಿಮಾ ಶ್ರೀನಿವಾಸ್ 6 ಲಕ್ಷ ರೂ ಮೌಲ್ಯದ ವಾಹನಗಳ 93.50 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಅನುವಂಶಿಕವಾಗಿ ಬಂದ 1,100 ಗ್ರಾಂ ಹಾಗೂ ಖರೀದಿಸಿರುವ 600 ಗ್ರಾಂ ಸೇರಿ ಒಟ್ಟು 1700 ಗ್ರಾಂ ಬಂಗಾರ ಹಾಗೂ 5 ಕೆಜಿ ಬೆಳ್ಳಿ ಸೇರಿ ಒಟ್ಟು 11.80 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದಾರೆ.

ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್ ಹೆಸರಲ್ಲಿ 3.70 ಲಕ್ಷ ರೂ ನಗದು, ಬ್ಯಾಂಕ್ ಖಾತೆಗಳಲ್ಲಿ 1.3 ಕೋಟಿ ರೂ, ಬರಬೇಕಾದ ಸಾಲದ 65.95 ಲಕ್ಷ ರೂಪಾಯಿ ಇರುವುದಾಗಿ ತಿಳಿಸಿದ್ದಾರೆ. ಇನ್ನು 33ಲಕ್ಷ ಮೌಲ್ಯದ ಅನುವಂಶಿಕವಾಗಿ ಬಂದ 900ಗ್ರಾಂ ಬಂಗಾರ ಸೇರಿ ಒಟ್ಟು 2.36 ಕೋಟಿ ರೂ ಚರಾಸ್ತಿ ಹೊಂದಿದ್ದಾರೆ.
ಮಗ ಬ್ರಿಜೇಶ್ ಎಸ್ ಯಾದವ್ ಹೆಸರಿನಲ್ಲಿ 20 ಸಾವಿರ ರೂ ನಗದು, ಬ್ಯಾಂಕ್ ಖಾತೆಗಳಲ್ಲಿ 3.28 ಲಕ್ಷ ರೂಪಾಯಿ ಠೇವಣಿ ಇದ್ದು, 6.69 ಲಕ್ಷ ಮೌಲ್ಯದ ವಾಹನ, 5.50 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಮಗಳು ವಿನಿಶಾ ಎಸ್ ಯಾದವ್ ಹೆಸರಲ್ಲಿ ನಗದು 18 ಸಾವಿರ ರೂ , ಬ್ಯಾಂಕ್ ಖಾತೆಗಳಲ್ಲಿ 1.30 ಲಕ್ಷ ರೂ ಹಾಗೂ 5.50 ಲಕ್ಷ ಮೌಲ್ಯದ ಕೊಡುಗೆ 100ಗ್ರಾಂ ಬಂಗಾರ ಸೇರಿ ಒಟ್ಟು ರೂ 38.76 ಲಕ್ಷ ಚರಾಸ್ತಿ ಹೊಂದಿದ್ದಾರೆ.
ಅಭ್ಯರ್ಥಿ ಕೆ.ಪೂರ್ಣಿಮಾ 63.88 ಕೋಟಿ ರೂಪಾಯಿ, ಪತಿ ಡಿ.ಟಿ.ಶ್ರೀನಿವಾಸ್ 29.18 ಕೋಟಿ ರೂಪಾಯಿ, ಅವಲಂಬಿತರಾದ ಮಗ ಬ್ರಿಜೇಶ್ ಎಸ್ ಯಾದವ್ 14.6 ಕೋಟಿ ರೂಪಾಯಿ ಹಾಗೂ ಮಗಳು ವಿನಿಶಾ ಎಸ್ ಯಾದವ್ 32.40 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ರೂ 104.8 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.
ಕಳೆದ 2018ರಲ್ಲಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು.
2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ದಿವಂಗತ ಮಾಜಿ ಸಚಿವ ಎ. ಕೃಷ್ಣಪ್ಪ ಅವರು ಸ್ಪರ್ಧಿಸಿ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು. ತಂದೆಯ ಸಾವಿನಿಂದ ಧೃತಿಗೆಡದೆ ಪೂರ್ಣಿಮಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು, ಅಂದಿನಿಂದ ಬಿಜೆಪಿ ಪಕ್ಷ ಸಂಘಟನೆ ಮಾಡುವ ಮೂಲಕ 2018ರಲ್ಲಿ ತಂದೆ ಸೋತ ಕ್ಷೇತ್ರದಲ್ಲಿ ಮಗಳು ಅಮೋಘ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡಿ ಇದೀಗ ಮರು ಆಯ್ಕೆ ಬಯಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications