ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಆರಂಭ
ಚಿತ್ರದುರ್ಗ, ಸೆಪ್ಟೆಂಬರ್, 28: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು (ಸೆಪ್ಟೆಂಬರ್ 29) ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಆರಂಭವಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ನಗರದ ಜೈನಧಾಮ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯು ಬೃಹತ್ ಶೋಭಾಯಾತ್ರೆಯೊಂದಿಗೆ ಅದ್ದೂರಿಯಾಗಿ ಆರಂಭವಾಯಿತು.
ಈ ಬೃಹತ್ ಗಣೇಶೋತ್ಸವಕ್ಕೆ ಭಜರಂಗದಳ ರಾಷ್ಟ್ರೀಯ ಸಂಯೋಜಕ ಧೀರಾಜ್ ದೋನೆರಿಯಾ ಚಾಲನೆ ನೀಡಿದರು. ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೆರಿಸುವ ಮೂಲಕ ಬೃಹತ್ ಶೋಭಾಯಾತ್ರೆಗೆ ಚಾಲನೆ ದೊರೆಯಿತು.

ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತರು ಹರಿದು ಬಂದಿದ್ದರು. ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಮಧ್ಯಾಹ್ನ 12ಕ್ಕೆ ಜೈನಧಾಮದಿಂದ ಹೊರಟ ಗಣೇಶ ಮೂರ್ತಿಯ ಮೆರವಣಿಗೆ ಚಂದ್ರವಳ್ಳಿಯಲ್ಲಿ ಕೊನೆಗೊಳ್ಳಲಿದೆ. ಚಂದ್ರವಳ್ಳಿಯಲ್ಲಿ ನಿರ್ಮಿಸಿದ ಬಾವಿಯಲ್ಲಿ ತಡರಾತ್ರಿ ವಿಸರ್ಜನೆ ಮಾಡಲಾಗುತ್ತದೆ.
ಶೋಭಾಯಾತ್ರೆಯ ಅಂಗವಾಗಿ ನಿರ್ಮಿಸಿದ್ದ ಸ್ತಬ್ಧಚಿತ್ರಗಳು ವಿಶೇಷ ಗಮನ ಸೆಳೆದವು. ಮರಾಠ ಸಮಾಜದ ಶಿವಾಜಿ, ಸಂಘಪರಿವಾರ ರೂಪಿಸಿದ್ದ ಶ್ರೀರಾಮ, ಆಂಜನೇಯ ಹಾಗೂ ಸಾವರ್ಕರ್ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸ್ತಬ್ಧಚಿತ್ರ ಹಾಗೂ ಗಣಪತಿ ಮೂರ್ತಿಯ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಭಕ್ತರು, ದೇವರಿಗೆ ಭಕ್ತಿ ಸಮರ್ಪಿಸಿ ಪುನೀತರಾಗುತ್ತಿದ್ದರು.
ಮೆರವಣಿಗೆಯುದ್ದಕ್ಕೂ 'ಜೈ ಶ್ರೀರಾಮ್', 'ಗಣಪತಿ ಬಪ್ಪ ಮೋರಯಾ', 'ಭಾರತ್ ಮಾತಕೀ ಜೈ' ಘೋಷಣೆಗಳು ಮೊಳಗಿದವು. ಛತ್ರಪತಿ ಶಿವಾಜಿ, ಭಗತ್ ಸಿಂಗ್, ಅಜಾದ್, ಹನುಮಂತ, ಬೃಹತ್ ಗಾತ್ರದ ಕೇಸರಿ ಬಾವುಟಗಳು ಎಲ್ಲೆಡೆ ರಾರಾಜಿಸಿದವು. ಶೋಭಾಯಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಜನಸಾಗರ ಹರಿದು ಬಂದಿದೆ.
ದಾವಣಗೆರೆ, ಬೆಂಗಳೂರು, ವಿಜಯನಗರ, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹಾಸನ, ಹಾವೇರಿ ಸೇರಿ ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಕೇಸರಿ ಶಲ್ಯ, ಹಣೆಗೆ ತಿಲಕ ಇಟ್ಟುಕೊಂಡಿದ್ದ ಯುವಪಡೆ ಹುಮ್ಮಸ್ಸಿನಿಂದ ಕಾಣಿಸಿಕೊಂಡಿತು. ಅಷ್ಟೇ ಅಲ್ಲದೆ ಗುಂಪುಗುಂಪಾಗಿ ಯುವತಿಯರು ಕೂಡ ಡಿಜೆ ಸದ್ದಿಗೆ ನೃತ್ಯ ಪ್ರದರ್ಶಿಸಿದರು.
ಪೊಲೀಸರ ಬಿಗಿ ಭದ್ರತೆ: ಈ ಅದ್ದೂರಿ ಶೋಭಾಯಾತ್ರೆ ನಡೆಯುತ್ತಿರುವುದರಿಂದ ಭಾರಿ ಜನಸ್ತೋಮ ಹರಿದುಬಂದಿತ್ತು. ಆದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ದಾರಿಯುದ್ದಕ್ಕೂ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಮೆರವಣಿಗೆಯ ಮೇಲೆ ನಿಗಾ ಇಟ್ಟಿದ್ದವು. ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮೆರವಣಿಗೆಯ ಭದ್ರತೆಯನ್ನು ಪರಿಶೀಲಿಸುತ್ತಿದ್ದರು. ವೀಕ್ಷಣಾ ಗೋಪುರದ ಮೇಲೆ ನಿಂತಿದ್ದ ಪೊಲೀಸರು ಮೆರವಣಿಗೆಯ ದೃಶ್ಯವನ್ನು ಚಿತ್ರೀಕರಿಸಿದ್ದರು. ನಗರ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲಾ ವಾಹನ, ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿತ್ತು.
ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಪ್ರತಿಮೆಗಳ ಸುತ್ತ ಕೇಸರಿ ಬಾವುಟ, ಬ್ಯಾನರ್ ಹಾಗೂ ಬಂಟಿಂಗ್ಸ್ ಕಟ್ಟಲಾಗಿತ್ತು. ಮದಕರಿ ನಾಯಕ ವೃತ್ತವನ್ನು ರಾಜ ವೈಭವದ ಮಾದರಿಯಲ್ಲಿ ಸಿಂಗರಿಸಲಾಗಿತ್ತು. ಒನಕೆ ಓಬವ್ವ ವೃತ್ತ, ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತಗಳು ಕಂಗೊಳಿಸುತ್ತಿದ್ದವು.
ಮೆರವಣಿಗೆ ಸಾಗುವ ಬಿ.ಡಿ.ರಸ್ತೆ ಹಾಗೂ ಹೊಳಲ್ಕೆರೆ ಮಾರ್ಗವನ್ನು ದೀಪಾಲಂಕರ ಮಾಡಲಾಗಿತ್ತು. ಅನೇಕ ಖಾಸಗಿ ಕಟ್ಟಡಗಳು ಕೂಡ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ವಾಸವಿ ವೃತ್ತ ಹಾಗೂ ಮಹಾವೀರ ವೃತ್ತದಲ್ಲಿ ನಿರ್ಮಿಸಿದ್ದ ಮಂಟಪಗಳು ಗಮನ ಸೆಳೆದವು.
ಚಿತ್ರದುರ್ಗ ಹಿಂದೂ ಮಹಾಗಣಪತಿಯ ಮುಕ್ತಿ ಬಾವುಟವನ್ನು ಎನ್.ಜೆ.ಹಳ್ಳಿ ಮಂಜುನಾಥ್ 2.5 ಲಕ್ಷ ರೂಪಾಯಿಗೆ ಹರಾಜಿನಲ್ಲಿ ತಮ್ಮದಾಗಿಸಿಕೊಂಡರು. ಹೂವಿನ ಹಾರವನ್ನು 1.60 ಲಕ್ಷ ರೂಪಾಯಿಗೆ ತೊರೆಕೋಲಮ್ಮನಹಳ್ಳಿ ತಿಪ್ಪೇಸ್ವಾಮಿ, ನೋಟಿನ ಹಾರ 2.5 ಲಕ್ಷ ರೂಪಾಯಿಗೆ ಕೆ.ಜಿ.ಟಿ.ಗುರುಮೂರ್ತಿ, ಪುರಿ ಜಗನ್ನಾಥ ಮಂದಿರ ಪ್ರತಿಕೃತಿಯನ್ನು 2.25 ಲಕ್ಷ ರೂಪಾಯಿಗೆ ಕೆ.ಸಿ.ನಾಗರಾಜ್, ಫಲಾಹಾರವನ್ನು 61,000 ರೂಪಾಯಿಗೆ ಉಮೇಶ್ ಕಾರಜೋಳ ಪಡೆದರು.












Click it and Unblock the Notifications