ಬರಪೀಡಿತ ತಾಲೂಕುಗಳ ಘೋಷಣೆ: ಹಿರಿಯೂರು, ಚಳ್ಳಕೆರೆಯನ್ನೇ ಬರ ಪಟ್ಟಿಯಿಂದ ಹೊರಗಿಟ್ಟ ಸರ್ಕಾರ, ಭುಗಿಲೆದ್ದ ಆಕ್ರೋಶ
ಚಿತ್ರದುರ್ಗ, ಆಗಸ್ಟ್, 26: ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಇತ್ತ ಅಷ್ಟೊ, ಇಷ್ಟೋ ಬಿತ್ತನೆಯಾದ ಬೆಳೆಗಳು ಮಳೆಯಿಲ್ಲದೆ ಸೊರಗುತ್ತಿವೆ. ಮತ್ತೊಂದೆಡೆ ಸರ್ಕಾರ ಮಳೆ ಇಲ್ಲದಿರುವ ಪ್ರದೇಶಗಳನ್ನು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. ಮತ್ತೊಂದೆಡೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ.
ನಮ್ಮ ತಾಲೂಕಿನಲ್ಲಿ ಮಳೆಯಾಗಿಲ್ಲ, ಬಿತ್ತನೆ ಕಾರ್ಯ ಕೂಡ ನಡೆದಿಲ್ಲ. ಒಂದಿಷ್ಟು ಬಿತ್ತನೆಯಾದ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ. ಮಳೆಗಾಗಿ ರೈತರು ಮುಗಿಲು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರು ಹಿರಿಯೂರು ತಾಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸಿಲ್ಲ. ರೈತರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಇತ್ತ ಜಿಲ್ಲೆಯ ಏಕೈಕ ಜೀವನಾಡಿ ಆಗಿರುವ ವಾಣಿ ವಿಲಾಸ ಜಲಾಶಯಕ್ಕೆ ಸಹ ನೀರು ಹರಿದು ಬಂದಿಲ್ಲ. ಈಗಿದ್ದರೂ ಸಹ ಸಚಿವರು ಕ್ಷೇತ್ರದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಣಗುತ್ತಿರುವ ಬೆಳೆಗಳು
ಹಿರಿಯೂರು ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಬಿತ್ತನೆಯಾಗಿದ್ದ ರಾಗಿ, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ತೊಗರಿ ಇನ್ನಿತರ ಬೆಳೆಗಳು ನೀರಿಲ್ಲದೆ ಸೊರಗುತ್ತಿವೆ. ತಾಲೂಕಿನಲ್ಲಿ ಮಳೆ ಬರುವ ಯಾವುದೇ ಮುನ್ಸೂಚನೆ ಇಲ್ಲ. ದಿನ ಕಳೆದಂತೆ ಸೂರ್ಯನ ತಾಪ ಹೆಚ್ಚುತ್ತಾ ಹೋಗುತ್ತಿದ್ದು, ಬೆಳೆಗಳು ಕಮರಿ ಹೋಗುತ್ತಿವೆ. ಇದರ ಜೊತೆಗೆ ತಾಲೂಕಿನ ಕೆರೆ ಕಟ್ಟೆಗಳಲ್ಲಿದ್ದ ಅಲ್ಪಸ್ವಲ್ಪ ನೀರು ಸಹ ಬತ್ತಿ ಹೋಗಿದ್ದು, ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಲಿಸ್ಟ್‌ನಲ್ಲಿ ಚಳ್ಳಕೆರೆಯೂ ಇಲ್ಲ
ಬರ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಜಿಲ್ಲೆಯ ಚಳ್ಳಕೆರೆ ತಾಲೂಕು ಸೇರಿಸಿಲ್ಲ. ಸರ್ಕಾರದ ನಿರ್ಧಾರ ಅಲ್ಲಿನ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯದ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಚಳ್ಳಕೆರೆ ಗುರುತಿಸಿಕೊಂಡಿದೆ. ಆದರೂ ಇಂತಹ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕನ್ನು ಗುರುತಿಸದಿರುವುದು ದುರ್ದೈವ ಸಂಗತಿಯಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications