ಟಿ.ಬಿ.ಜಯಚಂದ್ರಗೆ ಸಚಿವ ಸ್ಥಾನ ನೀಡಿ : ಶ್ರೀ ಶಾಂತವೀರ ಸ್ವಾಮೀಜಿ ಆಗ್ರಹ
ಚಿತ್ರದುರ್ಗ, ಮೇ, 22: ಶಿರಾ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಶ್ರೀ ಶಾಂತವೀರ ಶ್ರೀಗಳು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಅನುಭವ ರಾಜಕಾರಣಿ, ಅರ್ಹತೆ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ, ಜೊತೆಗೆ ಕಾನೂನಿನ ಅರಿವು ಹೊಂದಿದ್ದು, ಇವೆಲ್ಲವುಗಳನ್ನು ಒಳಗೊಂಡಿರುವ ಟಿ.ಬಿ.ಜಯಚಂದ್ರ ಅವರನ್ನು ಸಚಿವರನ್ನಾಗಿ ಆಯ್ಕೆಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಟಿ.ಬಿ.ಜಯಚಂದ್ರ ಅವರು 7 ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಸರ್ಕಾರ ಮತ್ತು ಪಕ್ಷಕ್ಕೆ ಘನತೆ ಮತ್ತು ಗೌರವ ತರುವ ಉತ್ತಮ ವಾಗ್ಮಿಯಾಗಿದ್ದಾರೆ. ಇದಲ್ಲದೆ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿದ್ದಾರೆ. ಈಗಿರುವಾಗ ಇವರನ್ನು ಸಚಿವರಾಗಿ ಮಾಡಿದರೆ ಉತ್ತಮ ಹಾಗೂ ಸಮಾಜಿಕ ನ್ಯಾಯ ಒದಗಿಸದಂತೆ ಅಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಕುಂಚಿಟಿಗ ಸಮಾಜದ ಏಕೈಕ ಶಾಸಕರಾಗಿ ಟಿ.ಬಿ.ಜಯಚಂದ್ರ ಆಯ್ಕೆ ಆಗಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷವನ್ನು ನಮ್ಮ ಸಮುದಾಯ ಬೆಂಬಲಿಸಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಕುಂಚಿಟಿಗ ಸಮುದಾಯವಿದೆ. ಅದರಲ್ಲೂ 4 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಹೆಚ್ಚಾಗಿ ಕಂಡುಬರುತ್ತದೆ. ಈ ಸಮುದಾಯದ ಏಕೈಕ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.
ಶಿಕ್ಷಕ ಅಮಾನತು
ರಾಜ್ಯದ ನೂತನ ಸರ್ಕಾರ ರಚನೆಯ ಸಂದರ್ಭದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿ ಶಿಕ್ಷಕ ಅಮಾನತುಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಕರ್ನಾಟಕ ವಿಧಾನಸಭಾ ಫಲಿತಾಂಶ ಪ್ರಕಟವಾಗಿ ಒಂದು ವಾರದ ಬಳಿಕ ಮೇ 20 ಶನಿವಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಂತಮೂರ್ತಿ ಎನ್ನುವವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಿಂದಿನ ಸರ್ಕಾರಗಳಲ್ಲಿ ಮುಖ್ಯಮಂತ್ರಿಗಳು ಮಾಡಿದ್ದ ಸಾಲಗಳ ವಿಚಾರವಾಗಿ ಪ್ರಸ್ತಾಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಕ ಶಾಂತಮೂರ್ತಿಯವರು ಸಿದ್ದರಾಮಯ್ಯ ಕುರಿತು ಎಲ್ಲ ಮುಖ್ಯಮಂತ್ರಿಗಳು ಮಾಡಿದ ಒಟ್ಟು ಸಾಲ 71, 331 ಕೋಟಿ ಆಗಿದ್ದರೇ, ಸಿದ್ದರಾಮಯ್ಯನವರು ಮಾಡಿದ ಸಾಲವೇ 2,42,000 ಕೋಟಿ ಆಗಿದೆ ಎಂದಿದ್ದರು.
ಕಾಂಗ್ರೆಸ್ ಪಕ್ಷ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ನೂತನ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಷಯವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಕನ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಈ ದೂರಿನ ಅನ್ವಯ ಜಿಲ್ಲಾಧಿಕಾರಿಗಳು ಡಿಡಿಪಿಐಗೆ ಕ್ರಮಕೈಗೊಳ್ಳಲು ಸೂಚಿಸಿದ್ದರು. ಡಿಡಿಪಿಐ ಸೂಚನೆ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಂತಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು.












Click it and Unblock the Notifications