ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದಿ. ಎಸ್. ನಿಜಲಿಂಗಪ್ಪ ನಿವಾಸ ಹಸ್ತಾಂತರ
ಚಿತ್ರದುರ್ಗ, ಡಿಸೆಂಬರ್ 17: ಕರ್ನಾಟಕದ ಮಾಜಿ ಮುಖ್ಯಮಂತ್ರಿ ನಾಡೋಜ ದಿ. ಎಸ್. ನಿಜಲಿಂಗಪ್ಪ ಅವರ 'ವಿನಯ' ನಿವಾಸವನ್ನು ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗಿದೆ. ನಿಜಲಿಂಗಪ್ಪ ಅವರ ಪುತ್ರ ಎಸ್. ಎನ್. ಕಿರಣ್ ಶಂಕರ್ ಸರ್ಕಾರದ ಪರವಾಗಿ ನಿವಾಸವನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಕಳೆದ ಗುರುವಾರ ಮನೆಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಡಿಸೆಂಬರ್ 16ರ ಸೋಮವಾರ ನಿವಾಸವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ ಅವರಿಗೆ ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ನಿಜಲಿಂಗಪ್ಪನವರ ನಿವಾಸ 'ವಿನಯ'ದ ಕೀ ಅನ್ನು ಹಸ್ತಾಂತರ ಮಾಡಿದರು. ಈ ನಿವಾಸವನ್ನು ಸ್ಮಾರಕವಾಗಿಸುವ ಮುಂದಿನ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ನಾಡೋಜ ದಿ. ಎಸ್. ನಿಜಲಿಂಗಪ್ಪ ನಿವಾಸ ಚಿತ್ರದುರ್ಗ ನಗರದ ವಿ. ಪಿ. ಬಡಾವಣೆಯಲ್ಲಿದೆ. ಎಸ್. ನಿಜಲಿಂಗಪ್ಪನವರು ವಾಸವಿದ್ದ ಮನೆಯನ್ನು ಸರ್ಕಾರ ವತಿಯಿಂದ ಖರೀದಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ, ಕಟ್ಟಡದ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಿದರು.
ಎಷ್ಟು ಮೊತ್ತಕ್ಕೆ ಖರೀದಿ?: ದಿ. ಎಸ್. ನಿಜಲಿಂಗಪ್ಪ ಅವರ ನಿವಾಸ ಅಮೆರಿಕದಲ್ಲಿರುವ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಹೆಸರಿನಲ್ಲಿತ್ತು. ಅವರು ತಮ್ಮ ತಂದೆ, ನಿಜಲಿಂಗಪ್ಪ ಅವರ ಪುತ್ರ ಎಸ್. ಎನ್. ಕಿರಣ್ ಶಂಕರ್ ಅವರಿಗೆ ಜಿಪಿಎ ನೀಡಿದ್ದರು. ಎನ್. ಕಿರಣ್ ಶಂಕರ್ ಗುರುವಾರ ಕರ್ನಾಟಕ ಸರ್ಕಾರದ ಹೆಸರಿಗೆ ನಿವಾಸವನ್ನು ನೋಂದಣಿ ಮಾಡಿಕೊಟ್ಟಿದ್ದರು.
ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಅಂದಾಜಿಸಿದಂತೆ 4,18,49,016 ರೂ. ಗಳಿಗೆ ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್. ನಿಜಲಿಂಗಪ್ಪನವರ ವಾರಸುದಾರರಿಂದ ಮನೆ ಖರೀದಿ ಮಾಡಲಾಗಿದೆ. ಅಲ್ಲದೇ ಇನ್ನೂ ರೂ. 80 ಲಕ್ಷ ಅನುದಾನ ಉಳಿದಿದ್ದು, ಈ ಅನುದಾನದಲ್ಲಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುತ್ತದೆ.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, "ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್. ನಿಜಲಿಂಗಪ್ಪ ಅವರ ವಾಸವಿದ್ದ ಮನೆಯನ್ನು ಸರ್ಕಾರದಿಂದ ಖರೀದಿ ಮಾಡಿ ಸಂರಕ್ಷಣೆ ಮಾಡಿ, ಸ್ಮಾರಕ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕಳೆದ ವಾರ ಸರ್ಕಾರ ವತಿಯಿಂದ ಖರೀದಿ ಮಾಡಲಾಗಿದ್ದು, ಪುನರುಜ್ಜೀವನ ಮಾಡುವ ಉದ್ದೇಶದಿಂದ ಎಸ್. ನಿಜಲಿಂಗಪ್ಪ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಹೇಳಿದರು.
"ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ, ಮೊಟ್ಟ ಮೊದಲನೆಯದಾಗಿ ಸಿವಿಲ್ ಕಾಮಗಾರಿಗಳನ್ನು ದುರಸ್ಥಿ ಪಡಿಸಿ, ನಂತರ ಸರ್ಕಾರದೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಮಾರಕ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಅಂದಾಜು ತಯಾರಿಸಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದ್ದು, ತಕ್ಷಣದಿಂದಲೇ ಪರಿಶೀಲನೆ ನಡೆಸಿ, ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತದೆ" ಎಂದರು.
ಈ ಯೋಜನೆಗೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ. ನಿಜಲಿಂಗಪ್ಪ ಅವರ ನಿವಾಸದಲ್ಲಿ ಅವರಿಗೆ ಸಂಬಂಧಪಟ್ಟ ಫೋಟೋ, ಉಡುಗೊರೆ ಹಾಗೂ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಇದ್ದು, ಅವುಗಳನ್ನು ಯಥಾವತ್ತಾಗಿ ಪ್ರಾಚ್ಯವಸ್ತು ಸಂಗ್ರಾಲಯದ ಸಹಯೋಗದೊಂದಿಗೆ ಸಂರಕ್ಷಣೆ ಮಾಡಿ, ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.












Click it and Unblock the Notifications