ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಣೇಹಳ್ಳಿಯಲ್ಲಿ ಸಿಜಿಕೆ ನುಡಿಚಿತ್ರ ಟಂಕಸಾಲೆ ಉದ್ಘಾಟಿಸಿದ ಮಾಜಿ ಸಿಎಂ ಯಡಿಯೂರಪ್ಪ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 3: "ಸುದೈವದಿಂದ ರಾಜ್ಯದ ಉದ್ದಗಲಕ್ಕೂ ಉತ್ತಮ ಮಳೆಯಾಗಿ, ಕೆರೆ- ಕೆಟ್ಟೆಗಳು ತುಂಬಿ ಒಳ್ಳೆಯ ಬೆಳೆ ಬರುವ ನಿರೀಕ್ಷೆಯಿದೆ," ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮಂಗಳವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಮಠದಲ್ಲಿ ಸಾಣೇಹಳ್ಳಿ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಕಾರಣಕ್ಕಾಗಿ ಇಂಥ ಭವ್ಯ ಕಾರ್ಯಕ್ರಮಗಳು ಆಗಿರಲಿಲ್ಲ. ಸುದೈವದಿಂದ ಇದೂ ಸಾಧ್ಯವಾಗಿದೆ ಎಂದರು.

ಸಾಣೇಹಳ್ಳಿಯಲ್ಲಿ ಸಾಂಸ್ಕೃತಿಕ ವಿಶ್ವವಿದ್ಯಾಲಯದ ಆರಂಭದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. "ನಾನು ಈಗ ಸಿಎಂ ಸ್ಥಾನದಲ್ಲಿದ್ದಿದ್ದರೆ ಇಲ್ಲಿಯೇ ಅನುಮತಿಯ ಆದೇಶವನ್ನು ನೀಡುತ್ತಿದ್ದೆ. ಬಸವರಾಜ ಬೊಮ್ಮಾಯಿಗೂ ಈ ಮಾತನ್ನು ಹೇಳುವೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಸಾಣೇಹಳ್ಳಿಯ ನಾಟಕೋತ್ಸವಕ್ಕೆ ಬರುವುದು ಸಂಪ್ರದಾಯವೇ ಆಗಿದೆ," ಎಂದು ತಿಳಿಸಿದರು.

Chitradurga: Former CM BS Yediyurappa Participated In The Saanehalli Drama Festival Program

"ತರಳಬಾಳು ಮಠ ನಾಡಿನ ಅಧ್ಯಾತ್ಮಿಕ, ಸಾಂಸ್ಕಂತಿಕ, ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸಿದೆ. ಸಾಣೇಹಳ್ಳಿಯ ಶಾಖಾಮಠವೂ ಮೂಲ ಮಠದ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ ಸಾಣೇಹಳ್ಳಿಯು ಕುಗ್ರಾಮ ಸಾಂಸ್ಕೃತಿಕ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಪಂಡಿತಾತರಾಧ್ಯ ಶ್ರೀಗಳ ಶ್ರಮ ಮತ್ತು ಬದ್ಧತೆ ಇದೆ. ಪೂಜ್ಯರು ಸಾಮಾಜಿಕ ಬದಲಾವಣೆ ತರುವಲ್ಲಿ ನಾಟಕಗಳು ಸಮರ್ಥ ಮಾಧ್ಯಮವೆಂದರಿತು ನಾಟಕ ಚಳವಳಿಯನ್ನೇ ಆರಂಭಿಸಿದ್ದಾರೆ."

"ವಚನ ಸಾಹಿತ್ಯದ ಸಾರವನ್ನು ಸಾರುವ ಪ್ರಯತ್ನ ಮಾಡುತ್ತಿದ್ದಾರೆ. ನಾಟಕ, ಕಲೆ ನಶಿಸುವ ಈ ಸಂದರ್ಭದಲ್ಲಿ ಪೂಜ್ಯರ ವಿಶೇಷ ಪರಿಶ್ರಮದಿಂದ ಉಳಿದು ಬೆಳೆಯುತ್ತಿದೆ. ಶಿವಸಂಚಾರ ನಾಟಕ ತಂಡ ನಮ್ಮ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಪರಿಚಯಿಸುತ್ತಿದೆ. ಶರಣ ಸಂಸ್ಕೃತಿಯನ್ನು ಹೊಸ ಕಲ್ಪನೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ."

"ನಾಟಕೋತ್ಸವ ಕೇವಲ ನಾಟಕಗಳ ಪ್ರದರ್ಶನವಷ್ಟೇ ಅಲ್ಲ. ವಿಚಾರ ಮಾಲಿಕೆ, ವಿಚಾರ ಸಂಕಿರಣ, ಧ್ಯಾನ, ಮೌನ, ಚಿಂತನೆ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನಗಳಂತಹ ಹತ್ತಾರು ಕಾರ್ಯಕ್ರಮಗಳ ಸಮ್ಮಿಲನ. ಕಲಾವಿದರಿಗೆ ರಂಗಸುಗ್ಗಿಯಾಗಿರುವಂತೆ ಸಾಹಿತಿಗಳಿಗೆ, ಚಿಂತಕರಿಗೆ, ವೈಚಾರಿಕರಿಗೆ, ಕೃಷಿಕರಿಗೆ, ಸಾಮಾನ್ಯ ಪ್ರೇಕ್ಷಕರಿಗೆ ನಾಡಹಬ್ಬವೇ ಆಗಿದೆ. ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಕಳೆದ ಹತ್ತನ್ನೆರಡು ವರ್ಷಗಳಿಂದ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾ ಬಂದಿರುವುದು ನನ್ನ ಸೌಭಾಗ್ಯವೇ ಸರಿ," ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಮರಿಸಿಕೊಂಡರು.

Chitradurga: Former CM BS Yediyurappa Participated In The Saanehalli Drama Festival Program

"ಈ ದಿನ ನಾನು ಉದ್ಘಾಟನೆ ಮಾಡಿರುವ ಸಿಜಿಕೆ ನುಡಿಚಿತ್ರ ಟಂಕಸಾಲೆ (ಸಿಜಿಕೆ ಡಿಜಿಟಲ್ ಆಡಿಯೋ, ವಿಡಿಯೋ ರೆಕಾರ್ಡಿಂಗ್ ಸ್ಟುಡಿಯೋ) ಭಾರತದ ಗ್ರಾಮೀಣ ಪ್ರದೇಶದಲ್ಲಿಯೇ ವಿನೂತನವಾದುದು. ಈ ಕೇಂದ್ರದ ಸಹಾಯದಿಂದ ಇಲ್ಲಿ ನಡೆಯುವ ಚಟುವಟಿಕೆಗಳು ಅದರಲ್ಲೂ ಶರಣರ ಬದುಕು-ಬರಹಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಗುಣಮಟ್ಟದೊಂದಿಗೆ ವಿಶ್ವದಾದ್ಯಂತ ಅಂತರ್ಜಾಲದ ಮೂಲಕ ಪ್ರಸಾರವಾಗಲು ಅನುಕೂಲವಾಗಿರುವುದು ಪೂಜ್ಯರ ದೂರದೃಷ್ಟಿಗೆ ಹಿಡಿದ ಕನ್ನಡಿಯಂತಿದೆ."

"ಕಲೆಗಳು ಮನರಂಜನೆಯ ಜೊತೆ ನೆಮ್ಮದಿಯ ಬದುಕನ್ನು ನೀಡುವಲ್ಲಿ ಸಹಕಾರಿಯಾದುದು. ನೀರಾವರಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪೂಜ್ಯರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವಾದರಗಳಿಗೆ ನಾನು ಸದಾ ಋಣಿಯಾಗಿರುವೆ. ಪೂಜ್ಯರ ಮತ್ತು ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ," ಎಂದರು.

ಕಾರ್ಯಕ್ರಮದ ನಂತರ ಉಪ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, "ಹಾನಗಲ್‌ನಲ್ಲಿ ಸೋತಿರುವುದರ ಬಗ್ಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡುತ್ತೇನೆ," ಎಂದು ಹೊಸದುರ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

Recommended Video

ಅಪ್ಪು ಸಾವಿನಿಂದ ಕಂಗೆಟ್ಟು ಜಯದೇವ ಆಸ್ಪತ್ರೆಯಲ್ಲಿ ತುಂಬಿದ ಜನಸಾಗರ | Oneindia Kannada

ಈ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಸಾಹಿತಿ ದೊಡ್ಡ ರಂಗೇಗೌಡ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಕರ್ನಾಟಕ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Former Chief Minister BS Yediyurappa proposed about the start of the Cultural University at Saanehalli In Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X