ಬಿಜೆಪಿಯ ಜನ ಸಂಕಲ್ಪ ಯಾತ್ರೆ ಬಗ್ಗೆ ಗೇಲಿ ಮಾಡಿದ ಪಾದಯಾತ್ರೆ ನಿರತ ಡಿಕೆ ಶಿವಕುಮಾರ್
ಚಿತ್ರದುರ್ಗ, ಅಕ್ಟೋಬರ್ 11: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ತಿರುಗೇಟು ಕೊಡಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಬಿಜೆಪಿ ಜನಸಂಕಲ್ಪ ಯಾತ್ರೆಗೆ ರಾಯಚೂರಿನಲ್ಲಿ ಚಾಲನೆ ನೀಡಲಾಗುತ್ತಿದೆ.
ಬಿಜೆಪಿ ನಾಯಕರ ಹೊಸ ಕಾರ್ಯಕ್ರಮ ಬಿಜೆಪಿ ಜನಸಂಕಲ್ಪ ಯಾತ್ರೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷದಿಂದ ಜನ ಸಂಕಲ್ಪ ಮಾಡಿರಲಿಲ್ಲ, ಈಗ ಜನ ಸಂಕಲ್ಪ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ರಾಯಚೂರು ಬಿಜೆಪಿ ಸಮಾವೇಶ ಕುರಿತು ಮಾತನಾಡಿರುವ ಅವರು, ನಾಯಕರು ಅಧಿಕಾರ ಇದ್ದಾಗ ಸ್ಪಂದನ ಮತ್ತು ಸಂಕಲ್ಪ ಮಾಡಬಹುದು. ಆದರೆ ಬಿಜೆಪಿ ಅವರು ಈಗ ಜನ ಹತ್ತಿರ ಹೋಗಲು ಹೊರಟಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮೀಸಲಾತಿ ಘೋಷಣೆಗೆ ನಮ್ಮ ಬೆಂಬಲ ಇದೆ
ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ಎಸ್‌ಸಿ,ಎಸ್‌ಟಿ ಮೀಸಲಾತಿ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಎಸ್‌ಸಿ,ಎಸ್‌ಟಿ ಮೀಸಲಾತಿ ಮಾಡಬೇಕು ಎಂಬುದಕ್ಕೆ ನಾವೇ ಬೇರು. ನಾಗಮೋಹನ್ ದಾಸ್ ಸಮಿತಿ ರಚನೆ ಕೂಡಾ ನಾವೇ ಮಾಡಿದ್ದು. ಇದು ಇಷ್ಟೋತ್ತಿಗೆ ಪಾರ್ಲಿಮೆಂಟ್‌ನಲ್ಲಿ ಕೂಡಾ ಅಂಗೀಕಾರ ಮಾಡಿ ಮುಗಿಸಬೇಕಿತ್ತು. ಮೀಸಲಾತಿ ಘೋಷಣೆಗೆ ನಾವು ಬೆಂಬಲ ಸೂಚಿಸಿದ್ದೇವೆ. ನಾವು ಮೀಸಲಾತಿ ವಿರುದ್ಧ ಇಲ್ಲ. ಪರ ಇದ್ದೇವೆ ಎಂದಿದ್ದಾರೆ.

ಪಿಸಿಸಿ ಸದಸ್ಯರಿಗೆ ಕೆಪಿಸಿಸಿ ಕಚೇರಿಯಲ್ಲಿ ಮತದಾನ
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರ ಜೊತೆಗೆ ಅಕ್ಟೋಬರ್ 15 ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಕೂಡಾ ನಡೆಯಲಿದೆ.
ಚುನಾವಣೆ ಇರುವುದರಿಂದ ಭಾರತ್ ಜೋಡೋ ಯಾತ್ರಿಗಳಿಗೆ ಅಲ್ಲೇ ಮತ ಹಾಕಲು ಬೂತ್ ಮಾಡುತ್ತೇವೆ. ಇನ್ನು ಪಿಸಿಸಿ ಸದಸ್ಯರಾದವರು ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಮಾಡುತ್ತಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

1 ಗಂಟೆ ತಡವಾಗಿ ಆರಂಭವಾದ ಭಾರತ್ ಜೋಡೋ
ಇನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಪಾದಯಾತ್ರೆ ಹಿರಿಯೂರಿನಿಂದ ಚಳ್ಳಕೆರೆ ಕಡೆ ಸಾಗಿದೆ. ಇಂದು ಬೆಳಗ್ಗೆ ಹರ್ತಿಕೋಟೆ ಗ್ರಾಮದಿಂದ ಯಾತ್ರೆ ಮುಂದೆ ಸಾಗಿದೆ. ಬೆಳಗ್ಗೆ ಮಳೆ ಬಂದ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿದೆ. ಈ ಪಾದಯಾತ್ರೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಚೇತನ ಹೋಟೆಲ್ ಬಳಿ ವಿಶ್ರಾಂತಿ ಪಡೆದು ಸಂಜೆ ಚಳ್ಳಕೆರೆ ನಗರ ತಲುಪಲಿದೆ. ನಂತರ ಮೊಳಕಾಲ್ಮೂರು ಮಾರ್ಗವಾಗಿ ಬಳ್ಳಾರಿ ತಲುಪಲಿದೆ.

ಕಾರ್ಮಿಕ ಮಹಿಳೆಯರ ಜೊತೆ ರಾಹುಲ್ ಗಾಂಧಿ ಮಾತುಕತೆ
ಚಿತ್ರದುರ್ಗದ ಇಂದಿನ ಭಾರತ್ ಜೋಡೋ ಯಾತ್ರೆ ಆರಂಭದಲ್ಲೇ ರಾಹುಲ್ ಗಾಂಧಿ, ನಾಲ್ಕು ಮಕ್ಕಳ ಜೊತೆ ಹೆಜ್ಜೆ ಹಾಕಿದ್ದಾರೆ. ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಿಂದ ಸಾಗಿ ಬಂದ ನಂತರ ಭಾರತ್ ಜೋಡೋ ಯಾತ್ರೆಯಲ್ಲಿ ಕೂಲಿ ಕಾರ್ಮಿಕ ಮಹಿಳೆಯರೂ ಕೂಡ ಭಾಗಿಯಾಗಿದ್ದರು. ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಬಳಿ ರಾಹುಲ್ ಗಾಂಧಿ ಕೂಲಿ ಕಾರ್ಮಿಕ ಮಹಿಳೆಯರ ಜೊತೆ ಮಾತನಾಡಿ, ಅವರ ಕಷ್ಟಗಳನ್ನು ಆಲಿಸಿದರು.












Click it and Unblock the Notifications