ಹೋಂ ಐಸೋಲೇಷನ್‌ನಿಂದ ಕೋವಿಡ್ ಹೆಚ್ಚಳ; ಶ್ರೀರಾಮುಲು
ಚಿತ್ರದುರ್ಗ, ಮೇ 25; "ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಲು ಹೋಂ ಐಸೋಲೇಷನ್ ಕಾರಣ" ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
Recommended Video
ಮಂಗಳವಾರ ಚಿತ್ರದುರ್ಗದಲ್ಲಿ ಮಾತನಾಡಿ, "ಜಿಲ್ಲೆಯಲ್ಲಿ ಸೋಂಕಿತರಿಗೆ ಹೋಂ ಐಸೋಲೇಷನ್ ಬೇಡ ಎಂದು 22 ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ" ಎಂದರು.
"ವೈಟ್ ಹಾಗೂ ಬ್ಲ್ಯಾಕ್ ಫಂಗಸ್ ಬಗ್ಗೆ ಯಾರೂ ಭಯ ಪಡುವುದುದ ಬೇಡ. ಇದಕ್ಕೆ ಕೇಂದ್ರ ಸರ್ಕಾರ ವ್ಯಾಕ್ಸಿನ್ ಕಳುಹಿಸಿದೆ. ಅದನ್ನು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಕಳಿಸಬೇಕಾಗಿದೆ. ಇದರ ಜೊತೆಗೆ ಕೋವಿಡ್ ವ್ಯಾಕ್ಸಿನ್‌ಗಳು ಇನ್ನು ಹೆಚ್ಚು ಹೆಚ್ಚು ಬೇಕಾಗಿದೆ" ಎಂದು ತಿಳಿಸಿದರು.

ಕೊರೊನಾ ವಿಚಾರದಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, "ಕೋವಿಡ್ ವಿಚಾರದಲ್ಲಿ ಕೆಲವು ಪಕ್ಷಗಳು ರಾಜಕಾರಣ ಮಾಡುತ್ತಿವೆ. ಇದು ನೋವಿನ ಸಂಗತಿಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಸಾವಿನ ಮನೆಯಲ್ಲಿ ರಾಜಕಾರಣ ಮಾಡುವಂತ ಕೆಲಸ ಆಗಬಾರದು. ಬದಲಿಗೆ ಸಾಂತ್ವನ ಹೇಳುವ ಕೆಲಸ ನಡೆಯಬೇಕಾಗಿದೆ. ವಿರೋಧ ಪಕ್ಷಗಳು ವ್ಯಾಕ್ಸಿನ್ ಹಾಗೂ ಸರ್ಕಾರ ಮಾಡುವ ಕೆಲಸಗಳ ಬಗ್ಗೆ ಟೀಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಕೆಲಸವೇನು?, ಟೀಕೆ ಮಾಡಿಕೊಂಡು ರಾಜಕಾರಣ ಮಾಡೋದೆ ಕೆಲಸನಾ?" ಎಂದು ಪ್ರಶ್ನಿಸಿದರು.
"ಮುಖ್ಯ ಮಂತ್ರಿಗಳನ್ನು ಟೀಕೆ ಮಾಡುವುದು ಹೋರಾಟ ಎಂದುಕೊಂಡಿದ್ದಾರೆ. ಮಹಾ ಮಾರಿ ಸೋಂಕನ್ನು ಓಡಿಸಲು ಸಿಎಂ, ಸಚಿವರು ಹಾಗೂ ಜಿಲ್ಲಾಡಳಿತ ದಿನದ 24 ಗಂಟೆ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.
"ಜಿಲ್ಲೆಯ 19 ಹಳ್ಳಿಗಳಲ್ಲಿ ಕೂಡ ಸೋಂಕು ಹೆಚ್ಚಾಗಿದೆ. ಅಲ್ಲಿಯೂ ಕೂಡ ತಪಾಸಣೆ ಕಾರ್ಯ ನಡೆಯುತ್ತಿದ್ದು, ಜಿಲ್ಲಾಡಳಿತ ಹೆಚ್ಚು ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದೇವೆ. ಇದರ ಜೊತೆಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಕೂಡ ಮಾಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.












Click it and Unblock the Notifications