ಚಿತ್ರದುರ್ಗದಲ್ಲಿ ಎಸ್.ನಾರಾಯಣ್ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ ದೊಡ್ಡಣ್ಣನ ಅಳಿಯ ವೀರೇಂದ್ರ ಪಪ್ಪಿ
ಚಿತ್ರದುರ್ಗ, ಏಪ್ರಿಲ್, 18: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಂಗಳವಾರ (ಏಪ್ರಿಲ್ 18) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದ್ಯಮಿ ವೀರೇಂದ್ರ ಪಪ್ಪಿ ಅವರು ತನ್ನ ಸಾವಿರಾರು ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಚಳ್ಳಕೆರೆ ನಗರದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮತ ಕ್ಷೇತ್ರಕ್ಕೆ ತೆರಳಿದ ಅವರು ಚಿತ್ರದುರ್ಗ ನಗರದ ಕನಕ ಸರ್ಕಲ್‌ನಿಂದ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ಮಾಡಿದರು. ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ತಾಲೂಕು ಚುನಾವಣೆ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಪಪ್ಪಿ ನಾಮಪತ್ರ ಸಲ್ಲಿಕೆಗೆ ಮಾವ ಹಾಗೂ ನಟ ದೊಡ್ಡಣ್ಣ, ಚಿತ್ರ ನಿರ್ಮಾಪಕ ಎಸ್. ನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಫೀರ್, ಕಾಂಗ್ರೆಸ್ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು.
ಅಲ್ಲದೆ ಮೊಳಕಾಲ್ಮೂರು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಅವರು ತನ್ನ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ, ನಂತರ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮತ್ತೊಂದು ಕಡೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಜಯಸಿಂಹ ಲೋಕನಾಥ್ ನಾಮಪತ್ರ ಸಲ್ಲಿಸಿದರು. ಇತ್ತ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಬೆಂಬಲಿಗರೊಂದಿಗೆ ಚುನಾವಣೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಅಲ್ಲದೆ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಸೇರಿದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.

ಕೆ.ಪೂರ್ಣಿಮಾ ಶ್ರೀನಿವಾಸ್ ಆಸ್ತಿ ವಿವರ
ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಸೋಮವಾರ (ಏಪ್ರಿಲ್ 17) ರಂದು ಮರು ಆಯ್ಕೆ ಬಯಸಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಶ್ರೀತೇರು ಮಲ್ಲೇಶ್ವರ ದೇವಾಲಯ, ಕಾಳಿಕಾಂಬಾ ದೇವಿ, ದುರ್ಗಾಪರಮೇಶ್ವರಿ ದೇವಾಲಯ, ಶ್ರೀಕೃಷ್ಣ ದೇವಾಲಯ, ಚರ್ಚ್ ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿ ನಂತರ ನಗರದ ಶ್ರೀತೇರು ಮಲ್ಲೇಶ್ವರ ದೇವಾಲಯದಿಂದ ಸಾವಿರಾರು ಬೆಂಬಲಿಗರ ಜೊತೆ ರೋಡ್ ಶೋ ನಡೆಸಿ, ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ತಮ್ಮ ಆಸ್ತಿಯ ಬಗ್ಗೆ ವಿವರ ನೀಡಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಒಟ್ಟು 63,88,28,157 ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಭ್ಯರ್ಥಿ ಕೆ.ಪೂರ್ಣಿಮಾ ಹೆಸರಲ್ಲಿ ನಗದು 1.75 ಲಕ್ಷ ರೂ, ಬ್ಯಾಂಕ್ ಖಾತೆಗಳಲ್ಲಿ 1.74 ರೂ ಕೋಟಿ, ವಿವಿಧ ಹೂಡಿಕೆಯಲ್ಲಿ ರೂ 1.98 ಕೋಟಿ ಇರುವುದಾಗಿ ತಿಳಿಸಿದ್ದಾರೆ. ಇನ್ನು 6.67 ಕೋಟಿ ಬರ ಬೇಕಾದ ಸಾಲ ಇರುವ ಬಗ್ಗೆ ವಿವರಿಸಿದ್ದಾರೆ. ಪೂರ್ಣಿಮಾ ಶ್ರೀನಿವಾಸ್ 6 ಲಕ್ಷ ರೂ ಮೌಲ್ಯದ ವಾಹನಗಳ 93.50 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಅನುವಂಶಿಕವಾಗಿ ಬಂದ 1,100 ಗ್ರಾಂ ಹಾಗೂ ಖರೀದಿಸಿರುವ 600 ಗ್ರಾಂ ಸೇರಿ ಒಟ್ಟು 1700 ಗ್ರಾಂ ಬಂಗಾರ ಹಾಗೂ 5 ಕೆಜಿ ಬೆಳ್ಳಿ ಸೇರಿ ಒಟ್ಟು 11.80 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದಾರೆ.
ಅಭ್ಯರ್ಥಿ ಕೆ.ಪೂರ್ಣಿಮಾ 63.88 ಕೋಟಿ ರೂಪಾಯಿ, ಪತಿ ಡಿ.ಟಿ.ಶ್ರೀನಿವಾಸ್ 29.18 ಕೋಟಿ ರೂಪಾಯಿ, ಅವಲಂಬಿತರಾದ ಮಗ ಬ್ರಿಜೇಶ್ ಎಸ್ ಯಾದವ್ 14.6 ಕೋಟಿ ರೂಪಾಯಿ ಹಾಗೂ ಮಗಳು ವಿನಿಶಾ ಎಸ್ ಯಾದವ್ 32.40 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ರೂ 104.8 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.
ಕಳೆದ 2018ರಲ್ಲಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. 2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ದಿವಂಗತ ಮಾಜಿ ಸಚಿವ ಎ. ಕೃಷ್ಣಪ್ಪ ಅವರು ಸ್ಪರ್ಧಿಸಿ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು.
ತಂದೆಯ ಸಾವಿನಿಂದ ಧೃತಿಗೆಡದೆ ಪೂರ್ಣಿಮಾ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು, ಅಂದಿನಿಂದ ಬಿಜೆಪಿ ಪಕ್ಷ ಸಂಘಟನೆ ಮಾಡುವ ಮೂಲಕ 2018ರಲ್ಲಿ ತಂದೆ ಸೋತ ಕ್ಷೇತ್ರದಲ್ಲಿ ಮಗಳು ಅಮೋಘ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡಿ ಇದೀಗ ಮರು ಆಯ್ಕೆ ಬಯಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications