Get Updates
Get notified of breaking news, exclusive insights, and must-see stories!

Chitradurga Lok Sabha Constituency: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಒಂದು ಹಿನ್ನೋಟ-ಮಾಹಿತಿ, ವಿವರ

ಚಿತ್ರದುರ್ಗ, ಮಾರ್ಚ್‌, 17: ಕೋಟೆಗಳ ನಾಡು ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು, ಇಂತಹ ಚಿತ್ರದುರ್ಗ ಜಿಲ್ಲೆಯಲ್ಲಿ 1952ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ. ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಬೇಸಿಗೆಯ ಬಿಸಿ ಏರುತ್ತಿರುವಂತೆಯೇ, ಚುನಾವಣಾ ಕಣ ರಂಗೇರುತ್ತಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಸದ್ಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳು ಅಲ್ಲದೆ, ನೆರೆಯ ತುಮಕೂರು ಜಿಲ್ಲೆಯ ಸಿರಾ ಹಾಗೂ ಪಾವಗಡ ಸೇರಿದಂತೆ ಒಟ್ಟು 08 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

Chitradurga Lok Sabha Constituency Voter details and history

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ-9,19,064, ಮಹಿಳೆ-9,22,769, ಇತರೆ-104 ಸೇರಿದಂತೆ ಒಟ್ಟು 18,41,937 ಮತದಾರರಿದ್ದಾರೆ. 2019ರಲ್ಲಿ ಜರುಗಿದ ಚುನಾವಣೆ ಸಂದರ್ಭದಲ್ಲಿ ಪುರುಷ-8,89,236, ಮಹಿಳೆ-8,70,772, ಇತರೆ-103 ಸೇರಿದಂತೆ ಒಟ್ಟು 17,60,111 ಮತದಾರರಿದ್ದರು.

ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ 81,886ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 18 ವರ್ಷ ವಯಸ್ಸು ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಚುನಾವಣಾ ಆಯೋಗ ಉತ್ತೇಜನ ನೀಡಲು ಕೈಗೊಂಡ ಹಲವು ಕ್ರಮಗಳಿಂದಾಗಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಅಗಲು ಸಾಧ್ಯವಾಗಿದೆ.

ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ನಂತರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪುರುಷ-1,25,058, ಮಹಿಳೆ-1,24,181, ಇತರೆ-13, ಒಟ್ಟು-2,30,560 ಮತದಾರರು.

ಚಳ್ಳಕೆರೆ : ಪುರುಷ- 1,10,448, ಮಹಿಳೆ-1,12,106, ಇತರೆ-06, ಒಟ್ಟು-2,22,560 ಮತದಾರರು.

ಚಿತ್ರದುರ್ಗ: ಪುರುಷ- 1,29,809, ಮಹಿಳೆ-1,34,398, ಇತರೆ-41, ಒಟ್ಟು-2,51,312 ಮತದಾರರು.

ಹಿರಿಯೂರು: ಪುರುಷ- 1,21,502, ಮಹಿಳೆ-1,24,210, ಇತರೆ-16, ಒಟ್ಟು-2,33,775 ಮತದಾರರು.

ಹೊಸದುರ್ಗ: ಪುರುಷ- 99,860, ಮಹಿಳೆ-99,596, ಇತರೆ-01, ಒಟ್ಟು-1,99,457 ಮತದಾರರು.

ಹೊಳಲ್ಕೆರೆ : ಪುರುಷ- 1,18,219, ಮಹಿಳೆ-1,18,737, ಇತರೆ-10, ಒಟ್ಟು-2,36,966 ಮತದಾರರು.

ತುಮಕೂರು ಜಿಲ್ಲೆಯ ಸಿರಾ -ಪುರುಷ- 1,13,788, ಮಹಿಳೆ- 1,12,898, ಇತರೆ-08, ಒಟ್ಟು- 2,26,694 ಮತದಾರರು. ಪಾವಗಡ -ಪುರುಷ-1,00,380, ಮಹಿಳೆ-96,643, ಒಟ್ಟು 1,97,032 ಮತದಾರರಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಇದೆ.

ಭಾರತ ದೇಶದ ಸ್ವಾತಂತ್ರ್ಯ ನಂತರ 1952ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ನಿಜಲಿಂಗಪ್ಪ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ.ಮರುಳಪ್ಪ ಅವರನ್ನು 79,152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಹೆಚ್.ಎಸ್.ವೆಂಕಟಾಚಲಯ್ಯ ಅವರು 44,211 ಮತಗಳನ್ನು ಗಳಿಸಿದ್ದರು.

1957ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್‍ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರು ಕಾಂಗ್ರೆಸ್ ಪಕ್ಷದ ಎಸ್. ರಂಗರಾವ್ ಅವರಿಗಿಂತ 11,159 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು.

ಆದರೆ 1962ರಲ್ಲಿ ನಡೆದ ಚುನಾವಣೆಯಲ್ಲಿ ಎಸ್.ವೀರಬಸಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾದ ಜಿ.ಬಸಪ್ಪ ಅವರನ್ನು 44,849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಎಸ್.ವೀರಬಸಪ್ಪ ಅವರು 1,72,673 ಮತಗಳನ್ನು ಗಳಿಸಿದರೆ, ಜಿ.ಬಸಪ್ಪ ಅವರು 1,27,824 ಮತಗಳನ್ನು ಪಡೆದರು. ಉಳಿದಂತೆ ಪಕ್ಷೇತರ ಅಭ್ಯರ್ಥಿ ಸಿ.ರಂಗಯ್ಯ ಅವರು ಕೇವಲ 16,515 ಮತಗಳನ್ನು ಗಳಿಸಿದರು.

1967ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಪುನಃ ಸ್ಪರ್ಧಿಸಿದ ಜೆ.ಎಂ.ಮಹ್ಮದ್ ಇಮಾಮ್ ಅವರು ಕಾಂಗ್ರೆಸ್‍ನ ಎಸ್.ವೀರಬಸಪ್ಪ ಅವರಿಗಿಂತ 31,932 ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಸಿ.ರಂಗಯ್ಯ ಹಾಗೂ ಪಿ.ಹೆಚ್.ಜಯದೇವಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

1971ರ ಚುನಾವಣೆಯಲ್ಲಿ ಎನ್.ಪಿ.ಜೆ. ಪಕ್ಷದಿಂದ ಸ್ಪರ್ಧಿಸಿದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ.ಎಂ.ಮಹ್ಮದ್ ಇಮಾಮ್ ಅವರನ್ನು 1,69,702 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯಶಾಲಿಯಾದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ರಂಗಯ್ಯ ಅವರು ಮೂರನೇ ಸ್ಥಾನ ಪಡೆದರು.

1977ರ ಲೋಕಸಭಾ ಚುನಾವಣೆಯಲ್ಲಿ ಕೆ.ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಹೆಚ್.ಸಿ.ಬೋರಯ್ಯ ಅವರಿಗಿಂತ 86,654 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು. ಪಕ್ಷೇತರ ಅಭ್ಯರ್ಥಿ ಚಂದ್ರಶೇಖರಯ್ಯ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

1980ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ.ಮಲ್ಲಣ್ಣ ಅವರು, ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್.ಗೌಡ ಅವರನ್ನು 1,09,361 ಮತಗಳಿಂದ ಸೋಲಿಸಿ ಎರಡನೇ ಬಾರಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್(ಯು) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಸಿ.ಬೋರಯ್ಯ ಮೂರನೇ ಸ್ಥಾನ ಹಾಗೂ ಜನತಾ (ಎಸ್)ನ ಸಿ.ಆರ್.ಬಸಪ್ಪ ನಾಲ್ಕನೇ ಸ್ಥಾನ ಗಳಿಸಿದರು.

ಮತ್ತೆ 1984ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಹೆಚ್.ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್.ಗೌಡ ಅವರನ್ನು 56,811 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಮೂಡಲಗಿರಿಯಪ್ಪ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಸಣ್ಣ ಚಿಕ್ಕಪ್ಪ ಅವರನ್ನು 1,42,193 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದರು. ಈ ಚುನಾವಣೆಯಲ್ಲಿ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

1991ರ ಚುನಾವಣೆಯಲ್ಲಿ ಮತ್ತೆ ಸಿ.ಪಿ.ಮೂಡಲಗಿರಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಎಲ್.ಜಿ.ಹಾವನೂರು ಅವರನ್ನು 82,512 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 07 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ 1996ರ ಚುನಾವಣೆಯಲ್ಲಿ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ.ಕೋದಂಡರಾಮಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ.ಮೂಡಲಗಿರಿಯಪ್ಪ ಅವರನ್ನು 19,382 ಮತಗಳ ಅಂತರದಿಂದ ವಿಜಯಿಯಾದರು. ಈ ಚುನಾವಣೆಯಲ್ಲಿ ಬರೋಬ್ಬರಿ 17 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.

1998ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಮೂಡಲಗಿರಿಯಪ್ಪ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಪಿ.ಕೋದಂಡರಾಮಯ್ಯ ಅವರನ್ನು 58,321 ಮತಗಳಿಂದ ಪರಾಭವಗೊಳಿಸಿ ಮೂರನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1999ರ ಚುನಾವಣೆಯಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕನ್ನಡ ಚಲನ ಚಿತ್ರರಂಗದ ನಟ ಶಶಿಕುಮಾರ್ ಅವರು ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಸಿ.ಪಿ.ಮೂಡಲಗಿರಿಯಪ್ಪ ಅವರನ್ನು ಕೇವಲ 11,178 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ ಅವರು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಪಿ.ಕೋದಂಡರಾಮಯ್ಯ ಅವರಿಗಿಂತ 37,460 ಹೆಚ್ಚು ಮತಗಳನ್ನು ಪಡೆದು ಆಯ್ಕೆ ಆಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 06 ಅಭ್ಯರ್ಥಿಗಳು ಕಣದಲ್ಲಿದ್ದರು. 2009ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜನಾರ್ಧನಸ್ವಾಮಿ ಅವರು, ಕಾಂಗ್ರೆಸ್‍ನ ಬಿ.ತಿಪ್ಪೇಸ್ವಾಮಿ ಅವರಿಗಿಂತ 1,35,656 ಮತಗಳ ಅಂತರದಿಂದ ಜಯಶಾಲಿಯಾದರು. ಈ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

2014ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಂ.ಚಂದ್ರಪ್ಪ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಜನಾರ್ಧನಸ್ವಾಮಿ ಅವರನ್ನು 1,01,291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನೋಟಾಗೆ ಒಟ್ಟು 8,895 ಮತಗಳು ಚಲಾವಣೆಯಾಗಿದ್ದವು.

2019ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಎ.ನಾರಾಯಣಸ್ವಾಮಿ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ನೋಟಾಗೆ ಒಟ್ಟು 4,368 ಮತಗಳು ಚಲಾವಣೆಯಾಗಿದ್ದವು. ಚುನಾವಣೆಯಲ್ಲಿ ಶೇಕಡಾ 70.64ರಷ್ಟು ಮತದಾನವಾಗಿತ್ತು.

ಈ ಬಾರಿಯ ಚುನಾವಣೆಯು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಯಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಚಿತ್ರದುರ್ಗ ಜಿಲ್ಲಾ ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಏಪ್ರಿಲ್‌ 26ರಂದು ಮತದಾನ ನಡೆಯಲಿದೆ. ಎಲ್ಲ ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಅಲ್ಲದೆ ಮತದಾನ ದಿನದಂದು ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+