ಚಿತ್ರದುರ್ಗ-ಚಳ್ಳಕೆರೆ-ಪಾವಗಡ ರಸ್ತೆ ರಾಷ್ಟೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ-ವೆಚ್ಚದ ಮಾಹಿತಿ ತಿಳಿಯಿರಿ
ಚಿತ್ರದುರ್ಗ, ಜುಲೈ, 12: ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿಲೋ ಮೀಟರ್ ಉದ್ದದ ರಸ್ತೆಯನ್ನು ರಾಷ್ಟೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ರಸ್ತೆ ಅಭಿವೃದ್ದಿಯಿಂದ ಆಂಧ್ರಪ್ರದೇಶ-ಕರ್ನಾಟಕದ ನಡುವೆ ಸಂಪರ್ಕ ವೃದ್ಧಿಸಲಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು. ಹಾಗಾದರೆ ಇದಕ್ಕೆ ತಗಲುವ ವಚ್ಚ ಎಷ್ಟು ಎಂದು ಇಲ್ಲಿ ತಿಳಿಯಿರಿ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಚಳ್ಳಕೆರೆ ತಾಲ್ಲೂಕಿನ 8,000 ಹೆಕ್ಟೇರ್ ಪ್ರದೇಶದಲ್ಲಿ ಐ.ಎಸ್.ಎಸ್.ಸಿ, ಇಸ್ರೋ, ಡಿ.ಆರ್.ಡಿ.ಓ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮುನ್ನೆಲೆಗೆ ಬಂದಿದೆ.

ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳು ಸರಿಯಿಲ್ಲ. ಈ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿಲೋ ಮೀಟರ್ ರಸ್ತೆಯನ್ನು 50 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಬಾರಿಗೆ ಅಭಿವೃದ್ಧಿ ಪಡೆಯಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.
ಬಿ.ಜೆ.ಕೆರೆ ಹೆದ್ದಾರಿ: 1.48 ಕೋಟಿ ರೂಪಾಯಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ ಮೊಳಕಾಲ್ಮೂರು ತಾಲ್ಲೂಕು ಬಿ.ಜಿ.ಕೆರೆ ಬಳಿಯ ಹೆದ್ದಾರಿ ಕಾಮಗಾರಿಯಿಂದ ಬಿ.ಜಿ.ಕೆರೆ ಗ್ರಾಮ ಎರಡು ಸೀಳಾಗಿ ಓಳಾಗಿದ್ದು, ಪ್ರತಿನಿತ್ಯ ಜನರು-ಶಾಲಾ ಮಕ್ಕಳು ಓಡಾಟ ಮಾಡಲು ತೊಂದರೆಯಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. ಸಮಸ್ಯೆ ನಿವಾರಣೆಗಾಗಿ 1.48 ಕೋಟಿ ರೂಪಾಯಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಹಿರಿಯೂರು-ಹುಳಿಯಾರು ಹೆದ್ದಾರಿಯ 31.3 ಕಿಲೋ ಮೀಟರ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 26 ಕಿಲೋ ಮೀಟರ್ ಹಾಗೂ ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯ 31.72 ಕಿಲೋ ಮೀಟರ್ ರಸ್ತೆ ಕಾಮಗಾರಿಯಲ್ಲಿ 26 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಎರಡು ಕಾಮಗಾರಿಗಳ ಪೈಕಿ ಬಾಕಿ ಇರುವ 5 ಕಿಲೋ ಮೀಟರ್ ರಸ್ತೆಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಕಡೂರು-ಹೊಸದುರ್ಗ ಹೊಸ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 184 ಕೋಟಿ ವೆಚ್ಚದಲ್ಲಿ 48 ಕಿಲೋ ಮೀಟರ್ ಹೆದ್ದಾರಿ ನಿಮಾರ್ಣಕ್ಕೆ ಶೀಘ್ರದಲ್ಲಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353 ಕಿಲೋ ಮೀಟರ್ ಉದ್ದ ರಾಷ್ಟೀಯ ಹೆದ್ದಾರಿ ಹಾದು ಹೋಗಿದೆ.
ಇದರಲ್ಲಿ 218 ಕಿಲೋ ಮೀಟರ್ ರಸ್ತೆ ಭಾರತ ಸರ್ಕಾರದ ಎನ್‌ಎಚ್‌ಎಐ ನಿರ್ವಹಣೆ ಮಾಡುತ್ತಿದೆ. ಉಳಿದ ರಸ್ತೆಯನ್ನು ರಾಜ್ಯದ ರಾಷ್ಟೀಯ ಹೆದ್ದಾರಿ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೈವೆ ಕಾಮಗಾರಿಗಳನ್ನು 8 ರಿಂದ 10 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾಮಗಾರಿ: ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯದ ಹೆದ್ದಾರಿ ಕಾಮಗಾರಿ ಭೂ ಸ್ವಾಧೀನ ಸಮಸ್ಯೆ ಹಾಗೂ ಸ್ಥಳೀಯರ ಸಮಸ್ಯೆಯಿಂದ ವಿಳಂಬ ಆಗಿದೆ. ಸದ್ಯ ಹಿರಿಯೂರು ಸಮೀಪದ 9 ಕಿಲೋ ಮೀಟರ್ ರಸ್ತೆ ನಿರ್ಮಾಣ ಬಾಕಿಯಿದೆ. ವಿನಾ ಕಾರಣ ಯಾರು ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಗಾಲು ಹಾಕಬಾರದು. ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.












Click it and Unblock the Notifications