ಬಹಿರಂಗ ಪ್ರಚಾರಕ್ಕೆ ತೆರೆ: ಕೋಟೆ ನಾಡಿನ ಅಖಾಡದಲ್ಲಿ ಕೊನೇ ಹಂತದ ಶಕ್ತಿ ಪ್ರದರ್ಶನ
ಚಿತ್ರದುರ್ಗ, ಮೇ 08: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಒಂದು ದಿನ ಬಾಕಿ ಉಳಿದಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕೊನೆಯದಾಗಿ ಶಕ್ತಿ ಪ್ರದರ್ಶಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರಪ್ಪ ಅವರು ನಗರದ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ದೇವಾಲಯದಲ್ಲಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು. ದೇವಾಲಯದಿಂದ ಆರಂಭವಾಗದ ಮೆರವಣಿಗೆ ಗಾಂಧಿ ವೃತ್ತ, ಟಿಬಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮತಯಾಚಿಸಿದರು.

ಇತ್ತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್. ಮಹೇಶ್ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಂಗಡಿ ಮುಂಗಟ್ಟುಗಳ ಮಾಲೀಕರು, ವರ್ತಕರು ಹಾಗೂ ಸಾರ್ವಜನಿಕರ ಬಳಿ ಕೈ ಮುಗಿದು ಮತಪ್ರಚಾರ ನೆಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ 'ಸ್ವಾಭಿಮಾನಿ ಮತದಾರರೇ ಹಿರಿಯೂರು ಕ್ಷೇತ್ರವನ್ನು ಮಾರಿಕೊಳ್ಳಬೇಡಿ. ಹೊರಗಿನವರನ್ನು ಬಿಟ್ಟು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಿ, ಉತ್ತಮ ಆಡಳಿತಕ್ಕಾಗಿ ನಿಮ್ಮ ಗುರುತು ಪುಟ್ಬಾಲ್ ಚಿಹ್ನೆ ಆಗಿರಲಿ. ಎರಡು ಸಾವಿರದ ಹಣಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ. ದಯಮಾಡಿ ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ಕ್ಷೇತ್ರವನ್ನು ಹರಾಜು ಹಾಕಬೇಡಿ, ಇದು ನಿಮ್ಮ ಊರಿನ ಸ್ವಾಭಿಮಾನದ ಪ್ರಶ್ನೆಯಾಗಿದೆ. ನಿಮ್ಮಂತ ಪ್ರಜ್ಞಾವಂತ ಮತದಾರು ಆಲೋಚನೆ ಮಾಡಿ ಒಂದೇ ಒಂದು ಬಾರಿ ಅವಕಾಶ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ' ಎಂದು ಮನವಿ ಮಾಡಿದರು.

ಪೂರ್ಣಿಮಾ ಶ್ರೀನಿವಾಸ್ ಅಬ್ಬರದ ಪ್ರಚಾರ
ಮತ್ತೊಂದು ಕಡೆ ಬಿಜೆಪಿಯ ಶಾಸಕಿ ಹಾಗೂ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಕೂಡ ವಿವಿಧ ಭಾಗಗಳಲ್ಲಿ ಅಪಾರ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಭರ್ಜರಿ ಮತಪ್ರಚಾರ ನೆಡೆಸಿದ್ದಾರೆ. ಇದಲ್ಲದೆ ಚಿತ್ರದುರ್ಗ, ಹೊಳಲ್ಕೆರೆ , ಹೊಸದುರ್ಗ, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಆಯಾ ಪಕ್ಷಗಳ ಅಭ್ಯರ್ಥಿಗಳು ಮತಶಿಕಾರಿ ನಡೆಸಿದ್ದಾರೆ. ಜಿಲ್ಲೆಯ ಹೈ ಹೋಲ್ಟೇಜ್ ಕ್ಷೇತ್ರವಾಗಿದ್ದ ಹಿರಿಯೂರು ತ್ರಿಕೋನ ಸ್ಪರ್ಧೆಯಿಂದ ಏರ್ಪಟ್ಟಿದೆ.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಎನ್.ವೈ ಗೋಪಾಲಕೃಷ್ಣ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ನಡುವೆ ಪೈಪೋಟಿ ಶುರುವಾಗಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಆಂಜನೇಯ ನಡುವೆ ನೇರ ಜಿದ್ದಾಜಿದ್ದಿ ನಡೆಯಲಿದೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಡಾ. ಜಯಸಿಂಹ ಲೋಕನಾಥ್ ಕೂಡ ಪೈಪೋಟಿ ನೀಡಲಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ಯಾಸಿನೊ ದೊರೆ ವೀರೇಂದ್ರ ಪಪ್ಪಿ ಹಾಗೂ ಬಿಜೆಪಿ ಅಭ್ಯರ್ಥಿ ಜಿ.ಹೆಚ್ ತಿಪ್ಪಾರೆಡ್ಡಿ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಇವರಿಬ್ಬರಿಗೆ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜಿ ಗೋವಿಂದಪ್ಪ, ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಹಾಗೂ ಮಂಜುನಾಥ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ಲಿಂಗಮೂರ್ತಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಇತ್ತ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ, ಬಿಜೆಪಿ ಅನಿಲ್ ಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ರವೀಶ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಕೆ.ಟಿ ಕುಮಾರಸ್ವಾಮಿ ಕೂಡ ಸಾವಾಲಾಗಿದ್ದಾರೆ.












Click it and Unblock the Notifications