ಆರ್ಯರು ಹೊರಗಿನವರಲ್ಲ ಎಂಬ ವೈಜ್ಞಾನಿಕ ಪುರಾವೆಯಿದೆ: ಸಿದ್ದುಗೆ ನಾರಾಯಣಸ್ವಾಮಿ ತಿರುಗೇಟು
ಚಿತ್ರದುರ್ಗ, ಮೇ 30 : ಬ್ರಿಟಿಷರ ಕಾಲದಲ್ಲೇ ಆರ್ಯರು, ದ್ರಾವಿಡರು ಚೆರ್ಚೆಯ ಸೃಷ್ಟಿಯಾಗಿದ್ದು, ಆದರೆ ಆರ್ಯರು ಹೊರಗಿನವರಲ್ಲ ಎಂಬುದಕ್ಕೆ ವೈಜ್ಞಾನಿಕ ಪುರಾವೆಯಿದೆ. ಈಗ ಆರ್ಯರು, ದ್ರಾವಿಡರು ಚರ್ಚೆ ಹುಟ್ಟು ಹಾಕುವುದು ಸಿದ್ಧರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಸಿದ್ದು ವಿರುದ್ಧ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಹೆಡ್ಗೇವಾರ್ ಅವರ ಸಾಮಾಜಿಕ ಕಳಕಳಿ ಹಾಗೂ ಅನೇಕ ವಿಚಾರಧಾರೆಗಳು ಮತ್ತು ಹಿಂದುತ್ವದ ಸಿದ್ಧಾಂತದ ಮೇಲೆ ರೂಪುಗೊಂಡ ರಾಜಕೀಯ ಪಕ್ಷ ಬಿಜೆಪಿ. 18 ರಾಜ್ಯಗಳಲ್ಲಿ ನಮ್ಮ ಪಕ್ಷ, ಸಮ್ಮಿಶ್ರ ಸರ್ಕಾರಗಳಿವೆ. ಜನರು ಕೊಟ್ಟಂತಹ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ.
ಪ್ರಧಾನಿ ಮೋದಿಯವರ 8 ವರ್ಷಗಳ ಸಾಧನೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಟಲ್ ಬಿಹಾರಿ ಹಾಗೂ ಮೋದಿ ಆಡಳಿತ ವೈಖರಿಯನ್ನು ಮೆಚ್ಚಿ 20 ಕೋಟಿಗೂ ಹೆಚ್ಚು ಜನರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದರು.

ಆರ್‌ಎಸ್‌ಎಸ್ ದೇಶ ವಿರೋಧಿಯಾಗಿದ್ರೆ ಬಿಜೆಪಿ ಗೆಲ್ಲುತ್ತಿರಲಿಲ್ಲ
ಮಹಾತ್ಮ ಗಾಂಧಿ ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು? ಯಾವುದಾದರೂ ದಾಖಲೆಯಿದ್ದರೆ ಕಾಂಗ್ರೆಸ್ ಹೇಳಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ನಾರಾಯಣಸ್ವಾಮಿ ಆಗ್ರಹಿಸಿದರು. ಇಂದು ಮೋದಿಯವರು ಗುಜರಾತಿನಲ್ಲಿ ಮಹಾತ್ಮ ಗಾಂಧೀಜಿಯವರ ಕನಸಿನ ಆಡಳಿತವನ್ನು ನೀಡುತ್ತಿದ್ದಾರೆ. ಗಾಂಧಿಯವರ ಸಿದ್ಧಾಂತಗಳನ್ನು ಬಿಜೆಪಿ ಒಪ್ಪಿಕೊಂಡಿದೆ ಎಂದು ಮೋದಿಯೇ ಪದೇ ಪದೇ ಹೇಳುವಾಗ ನೀವು ಏಕೆ ಚರ್ಚೆ ಮಾಡುತ್ತೀರಾ. ಒಂದು ವೇಳೆ ಆರ್‌ಎಸ್‌ಎಸ್ ದೇಶ ವಿರೋಧಿಯಾಗಿದ್ದರೆ ಜನ ಬಿಜೆಪಿಗೆ ಮತ ಹಾಕುತ್ತಿದ್ದರೇ? ಎಂದು ಪ್ರಶ್ನೆ ಹಾಕಿದರು.

ಸಾಮರಸ್ಯ ನಿರ್ಮಾಣಕ್ಕೆ ಸೂಕ್ತ ಮಾರ್ಗದರ್ಶನ
ಮಸೀದಿ ಸ್ಥಳಗಳಲ್ಲಿ ದೇಗುಲಗಳ ಕುರುಹು ಪತ್ತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಸ್ವತಂತ್ರ್ಯ ಪೂರ್ವದಲ್ಲೇ ಇತಿಹಾಸದ ಪುಟಗಳಲ್ಲಿದೆ ಇದೆಲ್ಲಾ ದಾಖಲಾಗಿದ್ದವು. ಬಿಜೆಪಿ ಸರ್ಕಾರ ಬಂದ ಬಳಿಕ ಬಯಲಾಗುತ್ತಿದೆ ಮತ್ತು ಚರ್ಚೆ ಆಗುತ್ತಿದೆ. ಆದರೆ, ಸಂಘ ಸಂಸ್ಥೆ, ರಾಜಕಾರಣದಿಂದ ಸಾಮರಸ್ಯ ಕದಡುವ ಕೆಲಸ ಬೇಡ. ಪ್ರಧಾನಿ ಮಂತ್ರಿ ಮತ್ತುರಾಜ್ಯ ಮುಖ್ಯಮಂತ್ರಿ ಸಾಮರಸ್ಯ ನಿರ್ಮಾಣಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದಿದ್ದಾರೆ.

ಪಾಕಿಸ್ತಾನ ಸೋತಾಗ ಭೂಮಿ ಬಿಟ್ಟಕೊಟ್ಟವರು ಯಾರು?
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪಾಕಿಸ್ತಾನದ ಮೇಲೆ ಮಾತ್ರ ವಿರಾವೇಶ, ಚೀನಾ ಬಗ್ಗೆ ಅಂಜಿಕೆ ಎಂದು ಸಿದ್ಧರಾಮಯ್ಯ ಮಾಡಿರುವ ಟ್ವೀಟ್ ವಿಚಾರವಾಗಿ ಮಾತಾನಾಡಿದ ನಾರಾಯಣಸ್ವಾಮಿ, ಚೀನಾ ವಿರುದ್ಧದ ಯುದ್ಧದ ವೇಳೆ ಕಾಂಗ್ರೆಸ್ ಭೂಮಿ ಬಿಟ್ಟುಕೊಟ್ಟಿದ್ದೇಕೆ?
ಪಾಕಿಸ್ತಾನ ಸೋತಾಗಲೂ ಭೂಮಿ ವಾಪಸ್ ಬಿಟ್ಟುಕೊಟ್ಟು, ಸೈನಿಕರನ್ನು ಬಿಟ್ಟು ಕಳುಹಿಸಿದ್ದು ಏಕೆ? ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ಮೊದಲು ಈ ಬಗ್ಗೆ ಉತ್ತರ ನೀಡಲಿ ಎಂದರು. ಅನುಭವ ಮಂಟಪ ಅತಿಕ್ರಮಿಸಿ ಮಸೀದಿ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ ಅನುಭವ ಮಂಟಪವನ್ನು ಹಿಂದುಗಳಿಗೆ ಮಾರಾಟ ಮಾಡಲು ಸಿದ್ಧ ಎಂದಿದ್ದಾರೆಂಬ ಮಾಹಿತಿಯಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಾರ್ಯ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಆರ್ಯರು ಹೊರಗಿನಿಂದ ಬಂದವರು ಎಂದಿದ್ದ ಸಿದ್ದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಮೊದಲು ದ್ರಾವಿಡರ ಅಥವಾ ಆರ್ಯರ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಪ್ರಶ್ನೆಯಾಕಿದ್ದರು. ಇದಕ್ಕೆ ಹಾಸನದಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ನಾನು ದ್ರಾವಿಡ, ದೇಶದ ಮೂಲ ನಿವಾಸಿ. ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದವರು. ಇಲ್ಲೇ ನೆಲೆಸಿರುವುದರಿಂದ ಅವರು ಭಾರತೀಯರಾಗಿದ್ದಾರೆ. ಅದಕ್ಕೆ ನನ್ನ ತಕರಾರು ಇಲ್ಲ. ಅವರಂತೆ ನೀವು ಭಾರತೀಯರಲ್ಲ, ದೇಶಬಿಟ್ಟು ಹೋಗಿ" ಎಂದು ನಾನು ಅವರಿಗೆ ಹೇಳುವುದಿಲ್ಲ ಎಂದು ತಿಳಿಸಿದ್ದರು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜರಾಜಕಾರಣದಲ್ಲಿ ಧರ್ಮ, ಜಾತಿ ಕುರಿತಾಗಿ ಜಟಾಪಟಿಗಳು ಶುರುವಾಗುತ್ತಿವೆ. ಇದೀಗ ಹೊಸದಾಗಿ ಶುರುವಾಗಿರುವ ಆರ್ಯ-ದ್ರಾವಿಡ ವಾದಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆಯೋ ಕಾದು ನೋಡಬೇಕಿದೆ.












Click it and Unblock the Notifications