ಮೊದಲ ಹಂತದ ಬೆಳೆ ಸಮೀಕ್ಷೆ ಪ್ರಕಾರ 62 ತಾಲೂಕುಗಳು ಬರ ಪಟ್ಟಿಗೆ ಸೇರಿವೆ-ಸಚಿವ ಕೃಷ್ಣ ಭೈರೇಗೌಡ
ಚಿತ್ರದುರ್ಗ, ಸೆಪ್ಟೆಂಬರ್ 06: ರಾಜ್ಯದಲ್ಲಿ ಮಳೆಯ ಅಭಾವ ಹಿನ್ನೆಲೆಯಲ್ಲಿ 62 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 18 ತನಕ ಮಳೆ ಕೊರೆತೆ ಇರುವ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದೇವೆ. ಮೊದಲ ಹಂತದ ಬೆಳೆ ಸಮೀಕ್ಷೆ ಪ್ರಕಾರ 62 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಬರ ಪಟ್ಟಿಗೆ ಆಯ್ಕೆಯಾಗಿದೆ. ಇನ್ನೊಂದು ಸುತ್ತು ಬೆಲೆ ಸಮೀಕ್ಷೆ ಮಾಡಬೇಕು. ಉಳಿದ 51 ತಾಲೂಕು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. 83 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ಸೂಚನೆ ನೀಡಿದ್ದು, 3-4 ದಿನಗಳಲ್ಲಿ ಸಮೀಕ್ಷೆ ವರದಿ ಬರುತ್ತದೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುತ್ತೇವೆ.
ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೂಡಾ ನಾವು ಸಲ್ಲಿಸುತ್ತೇವೆ. ಎಲ್ಲಿ ಬರ ಇದೆ ಅಲ್ಲಿಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡುತ್ತೇವೆ. ಮೇವಿನ ಕೊರತೆ ಆಗಬಾರದು ಎಂದು ರೈತರಿಗೆ 20 ಕೋಟಿ ವೆಚ್ಚದಲ್ಲಿ ರೈತರಿಗೆ ಉಚಿತ ಮೇವಿನ ಬೀಜ ನೀಡಲಾಗುತ್ತದೆ. ಬರ ಪ್ರದೇಶದಲ್ಲಿ ನರೇಗಾದಲ್ಲಿ 150 ಉದ್ಯೋಗ ಖಾತ್ರಿ ಕೆಲಸ ನೀಡಲು ಚಿಂತನೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಬಿಜೆಪಿಗೆ ಜನರ ಭಾವನೆಗಳ ಜೊತೆ ಚೆಲ್ಲಾಟ
ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಸ್ಥಿತಿ ದುಸ್ಥಿತಿಯಾಗಿದೆ. ಎಲ್ಲಾ ಬೆಲೆ ಏರಿಕೆ ಮಾಡಿ, ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ದೇಶದ ಸ್ಥಿತಿ ಇಂದು ಬಡವರನ್ನು ಸುಲಿದು ಸಾಹುಕಾರರನ್ನು ಸಾಕುತ್ತಿದ್ದಾರೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಂದಾಯ ಸಚಿವರು ಕಿಡಿಕಾರಿದರು.
ಬಿಜೆಪಿಯವರು ಹೊಟ್ಟೆ ಪಾಡಿನ ವಿಷಯ ಮುಚ್ಚಿ ಹಾಕಲು, ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ಮಾಡುತ್ತಿದ್ದಾರೆ. ಇಲ್ಲಿವರೆಗೂ ಅದು ಯಶಸ್ವಿ ಆಗಿತ್ತು, ಮುಂದೆ ಆಗಲ್ಲ. ಭಾವನಾತ್ಮಕ ಅಮಲಿನಲ್ಲಿ ಮತ ಪಡೆಯುವ ಪದ್ಧತಿ ಯಾವತ್ತಿಗೂ ಕೆಲಸ ಮಾಡಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಭಾವನಾತ್ಮಕ ವಿಷಯಗಳಿಂದ ದೇಶ ಉದ್ಧಾರ ಆಗಲ್ಲ. ಹಸಿದವರಿಗೆ ಅನ್ನ ನೀಡಬೇಕು. ಉದ್ಯೋಗ ನೀಡಿದಾಗ ದೇಶ ಅಭಿವೃದ್ಧಿ ಆಗುತ್ತದೆ. ಬಡವರನ್ನು ಮತಕ್ಕಾಗಿ ಉಪಯೋಗ ಮಾಡಿಕೊಳ್ಳುವ ರಾಜಕೀಯ ಕೊನೆ ಆಗಲಿದೆ ಎಂದು ತಿಳಿಸಿದರು.












Click it and Unblock the Notifications