ಬೆಂಕಿಯಲ್ಲಿ ಸುಟ್ಟು ಕರಕಲಾದವು ಮೇಯುತ್ತಿದ್ದ 300 ಕುರಿಗಳು
ಚಿತ್ರದುರ್ಗ, ಆಗಸ್ಟ್ 1: ಗುಡ್ಡವೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 300 ಕುರಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊರಕೇರೆದೇವಪುರದ ಬಳಿ ನಡೆದಿದೆ.
ಹೊಸದುರ್ಗ ತಾಲ್ಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಈ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹರಡಿ, ಅಲ್ಲೇ ಮೇಯುತ್ತಿದ್ದ ಕುರಿಗಳಿಗೂ ತಾಗಿದೆ. ಕುರಿಗಳೆಲ್ಲ ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿವೆ.
ಈ ಕುರಿಗಳ ಸಾವಿನಿಂದಾಗಿ ರೈತ ತಿಮ್ಮಪ್ಪನಿಗೆ ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಈ ಪ್ರಕರಣ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿ ಕಳೆದುಕೊಂಡು ನಷ್ಟ ಅನುಭವಿಸಿರುವ ರೈತನಿಗೆ ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರ ಒದಗಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.












Click it and Unblock the Notifications