Chintamani Elections: ಚಿಂತಾಮಣಿಯಲ್ಲಿ ಈ ಬಾರಿ ಯಾರ ನಡುವೆ ಹಣಾಹಣಿ?
ಕೋಲಾರ ಮತ್ತು ಚಿಕ್ಕಬಳ್ಳಾಪುರ ನಡುವೆ ಇರುವ ಚಿಂತಾಮಣಿ ಕಂಬಾಲಪಲ್ಲಿ ನರಮೇಧ ಪ್ರಕರಣದಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಚಿತವಾದ ಕ್ಷೇತ್ರ. ಲೋಕಸಭೆ ಚುನಾವಣೆಯಲ್ಲಿ ಕೋಲಾರ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಸೇರುತ್ತದೆ ಚಿಂತಾಮಣಿ. ಚಿಕ್ಕಬಳ್ಳಾಪುರ ಗಡಿ ಭಾಗದ ಚಿಂತಾಮಣಿ ಕ್ಷೇತ್ರ ಆರ್ಥಿಕತೆಯಲ್ಲಿ ಉಳಿದ ತಾಲೂಕುಗಳಿಗಿಂತ ಮುಂದಿದೆ. ಕೃಷಿ ಹೊರತಾದ ಉದ್ಯೋಗ ಕ್ಷೇತ್ರದಲ್ಲಿ ಸೃಷ್ಟಿಯಾಗಿಲ್ಲ. ಉತ್ತಮ ರಸ್ತೆಗಳು ಬೇಕು, ಕೈಗಾರಿಕೆಗಳು ಬರಬೇಕು ಎಂಬುದು ಜನರಬೇಡಿಕೆಯಾಗಿದೆ.
ಚಿಂತಾಮಣಿ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ನ ಜೆ. ಕೆ. ಕೃಷ್ಣಾರೆಡ್ಡಿ. ಸತತ ಎರಡು ಗೆಲುವು ದಾಖಲು ಮಾಡಿರುವ ಅವರು ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಮಾಜಿ ಶಾಸಕ ಡಾ. ಎಂ. ಸಿ. ಸುಧಾಕರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದರೆ ಚಿಂತಾಮಣಿ ಕ್ಷೇತ್ರದ ಹಣಾಹಣಿ ಅಂತಿಮವಾಗಲಿದೆ. ಕ್ಷೇತ್ರದಲ್ಲಿ ಐದು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕ್ಷೇತ್ರದ ವಿಶೇಷ.

ರಾಜಕೀಯ ಇತಿಹಾಸ; ಚಿಂತಾಮಣಿ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ. 5 ಬಾರಿ ಪಕ್ಷೇತರರು, ಐದು ಬಾರಿ ಕಾಂಗ್ರೆಸ್, 4 ಬಾರಿ ಜನತಾದಳ, ಜನತಾಪಕ್ಷ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆದಿದ್ದಾರೆ. 1957 ರಿಂದ 2013ರ ತನಕ ಟಿ. ಕೆ. ಗಂಗಿರೆಡ್ಡಿ, ಎಂ. ಸಿ. ಆಂಜನೇಯ ರೆಡ್ಡಿ ಕುಟುಂಬದವರು ಇಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಈ ಮಾದರಿಯಲ್ಲಿ ಕುಟುಂಬ ರಾಜಕೀಯ ಚಿಂತಾಮಣಿ ಕ್ಷೇತ್ರದಲ್ಲಿದೆ.
ಟಿ. ಕೆ. ಗಂಗಿ ರೆಡ್ಡಿ ಎರಡು ಬಾರಿ, ಅವರ ಅಳಿಯ ಕೆ. ಎಂ. ಕೃಷ್ಣಾ ರೆಡ್ಡಿ ಎರಡು ಬಾರಿ ಶಾಸಕರಾಗಿದ್ದಾರೆ. ಎಂ. ಸಿ. ಆಂಜನೇಯ ರೆಡ್ಡಿ ಎರಡು ಬಾರಿ, ಅವರ ಪುತ್ರ ಚೌಡರೆಡ್ಡಿ 5 ಬಾರಿ ಶಾಸಕರಾಗಿದ್ದಾರೆ. ಚೌಡರೆಡ್ಡಿಯವರ ಪುತ್ರ ಡಾ. ಎಂ. ಸಿ. ಸುಧಾಕರ್ ಎರಡು ಬಾರಿ ಶಾಸಕರಾಗಿದ್ದಾರೆ. 1957ರಲ್ಲಿ ಟಿ. ಕೆ. ಗಂಗಿ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾದರು. ಕಾಂಗ್ರೆಸ್‌ನ ಎಂ. ಸಿ. ಆಂಜನೇಯ ರೆಡ್ಡಿಯವರನ್ನು ಸೋಲಿಸಿ ಶಾಸಕರಾದರು. 1962ರಲ್ಲಿ ಎಂ. ಸಿ. ಆಂಜನೇಯ ರೆಡ್ಡಿ ಸ್ವತಂತ್ರ ಅಭ್ಯರ್ಥಿಯಾದರು. ಕಾಂಗ್ರೆಸ್‌ನ ವಿ. ಸೀತಪ್ಪ ಸೋಲಿಸಿದರು. 1967ರಲ್ಲಿ ಮತ್ತೆ ಟಿ. ಕೆ. ಗಂಗಿ ರೆಡ್ಡಿ ಸ್ವತಂತ್ರವಾಗಿ ಕಣಕ್ಕಿಳಿದು ಎಂ. ಸಿ. ಆಂಜನೇಯ ರೆಡ್ಡಿ ಸೋಲಿಸಿದರು.
ಎಂ. ಸಿ. ಆಂಜನೇಯ ರೆಡ್ಡಿ ಪುತ್ರ ಚೌಡರೆಡ್ಡಿ 1972ರ ಚುನಾವಣೆಯಲ್ಲಿ ಕಣಕ್ಕಿಳಿದರು. ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ವಿ. ಸೀತಪ್ಪರನ್ನು ಸೋಲಿಸಿ ಮೊದಲ ಬಾರಿಗೆ ಗೆದ್ದರು. 1978, 1983ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಹೊಡೆದರು. 1978ರಲ್ಲಿ ಟಿ. ಕೆ. ಗಂಗಿ ರೆಡ್ಡಿ, ಚೌಡರೆಡ್ಡಿ ಮುಖಾಮುಖಿಯಾದರು. ಇಂದಿರಾ ಕಾಂಗ್ರೆಸ್‌ನ ಚೌಡರೆಡ್ಡಿ ಜನತಾ ಪಕ್ಷದ ಗಂಗಿ ರೆಡ್ಡಿಯನ್ನು 26,370 ಮತಗಳ ಅಂತರದಲ್ಲಿ ಸೋಲಿಸಿದರು. 1983ರಲ್ಲಿ ಚೌಡರೆಡ್ಡಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾದರು. ಗಂಗಿ ರೆಡ್ಡಿ ಅಳಿಯ ಕೆ. ಎಂ. ಕೃಷ್ಣಾರೆಡ್ಡಿಯನ್ನು ಸೋಲಿಸಿದರು. ನಗರಾಭಿವೃದ್ಧಿ, ಗೃಹ ಸಚಿವರಾಗಿಯೂ ಚೌಡರೆಡ್ಡಿ ಕೆಲಸ ಮಾಡಿದ್ದಾರೆ.

1985ರ ಚುನಾವಣೆಯಲ್ಲಿ ಜನತಾಪಕ್ಷದ ಅಭ್ಯರ್ಥಿ ಕೆ. ಎಂ. ಕೃಷ್ಣಾರೆಡ್ಡಿ 7,300 ಮತಗಳ ಅಂತರದಿಂದ ಚೌಡರೆಡ್ಡಿಯನ್ನು ಸೋಲಿಸಿದರು. 1989ರಲ್ಲಿ ಮತ್ತೆ ಚೌಡಾರೆಡ್ಡಿ ಕೃಷ್ಣಾರೆಡ್ಡಿ ಸೋಲಿಸಿದರು. 1994ರಲ್ಲಿ ಕೆ. ಎಂ. ಕೃಷ್ಣಾರೆಡ್ಡಿ ಚೌಡರೆಡ್ಡಿಯನ್ನು ಸೋಲಿಸಿದರು. ಸರ್ಕಾರದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರು ಆದರು. 1999ರಲ್ಲಿ ಚೌಡರೆಡ್ಡಿ ಪಕ್ಷೇತರರಾದರು. ಕೆ. ಎಂ. ಕೃಷ್ಣಾರೆಡ್ಡಿ ಜೆಡಿಯುನಿಂದ ಕಣಕ್ಕಿಳಿದರು. ಚೌಡಾರೆಡ್ಡಿ 5ನೇ ಬಾರಿಗೆ ಗೆದ್ದರು. 2004ರ ಚುನಾವಣೆಯಲ್ಲಿ ಚೌಡಾರೆಡ್ಡಿ ಪುತ್ರ ವೃತ್ತಿಯಲ್ಲಿ ದಂತವೈದ್ಯರಾದ ಡಾ. ಎಂ. ಸಿ. ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿಯಾದರು. ಕೆ. ಎಂ. ಕೃಷ್ಣಾರೆಡ್ಡಿ ಬಿಜೆಪಿ ಅಭ್ಯರ್ಥಿಯಾದರು. 8100 ಮತಗಳ ಅಂತರದಲ್ಲಿ ಗೆದ್ದ ಸುಧಾಕರ್ ಮೊದಲ ಬಾರಿಗೆ ಶಾಸಕರಾದರು.
2008ರ ಬಳಿಕದ ಚಿತ್ರಣ; 2008ರ ಚುನಾವಣೆಯಲ್ಲಿ ಡಾ. ಎಂ. ಸಿ. ಸುಧಾಕರ್ ಕಾಂಗ್ರೆಸ್‌ನಿಂದ ಕೆ. ಎಂ. ಕೃಷ್ಣಾರೆಡ್ಡಿ ಜೆಡಿಎಸ್‌ನಿಂದ ಎದುರಾಳಿಗಳಾದರು. 1246 ಮತಗಳ ಅಂತರದಲ್ಲಿ ಗೆದ್ದ ಸುಧಾಕರ್ 2ನೇ ಬಾರಿಗೆ ಶಾಸಕರಾದರು. 2012ರಲ್ಲಿ ಮಾಜಿ ಸಚಿವ ಕೆ. ಎಂ. ಕೃಷ್ಣಾರೆಡ್ಡಿ ನಿಧನ ಹೊಂದಿದರು. 2013ರ ಚುನಾವಣೆಯಲ್ಲಿ ಕೆ. ಎಂ. ಕೃಷ್ಣಾರೆಡ್ಡಿ ಮಗಳಾದ ವಾಣಿಕೃಷ್ಣಾ ರೆಡ್ಡಿ ಜೆಡಿಎಸ್ ಟಿಕೆಟ್ ಬಯಸಿದರು. ಹಾಲಿ ಶಾಸಕ ಡಾ. ಎಂ. ಸಿ. ಸುಧಾಕರ್ ಕಾಂಗ್ರೆಸ್ ತೊರೆದು ಪಕ್ಷೇತರ ಅಭ್ಯರ್ಥಿಯಾದರು. ಕಾಂಗ್ರೆಸ್ ವಾಣಿಕೃಷ್ಣಾ ರೆಡ್ಡಿಗೆ ಟಿಕೆಟ್ ನೀಡಿತು. ಜೆಡಿಎಸ್ ಪಕ್ಷ ಬೆಂಗಳೂರಿನ ಎಂ. ಕೃಷ್ಣಾರೆಡ್ಡಿಗೆ ಟಿಕೆಟ್ ನೀಡಿತು. ಜಿ. ಕೆ. ಕೃಷ್ಣಾರೆಡ್ಡಿ ಎಂದೇ ಕರೆಸಿಕೊಳ್ಳುವ ಅವರು ಚುನಾವಣೆಯಲ್ಲಿ 1696 ಮತಗಳ ಅಂತರದಲ್ಲಿ ಗೆದ್ದರು.
2013ರಲ್ಲಿ 68,950 ಮತಗಳನ್ನು ಪಡೆದು ಗೆಲ್ಲುವ ಮೂಲಕ ಚಿಂತಾಮಣಿಯ ವಂಶಪಾರಂಪರ್ಯ ರಾಜಕೀಯಕ್ಕೆ ಕೊನೆ ಹಾಡಿದರು ಜಿ. ಕೆ. ಕೃಷ್ಣಾರೆಡ್ಡಿ. ಪಕ್ಷೇತರ ಡಾ. ಎಂ. ಸಿ. ಸುಧಾಕರ್ 67,254 ಮತಗಳನ್ನು ಪಡೆದರು. 2018ರಲ್ಲಿ ಮತ್ತೆ ಜಿ. ಕೆ. ಕೃಷ್ಣಾರೆಡ್ಡಿ 87,753 ಮತಗಳನ್ನು ಪಡೆಯುವ ಮೂಲಕ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಬಾರಿಯ ಚುನಾವಣೆಗೆ ಸಹ ಅವರು ಟಿಕೆಟ್ ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ ಡಾ. ಎಂ. ಸಿ. ಸುಧಾಕರ್ ಭಾರತೀಯ ಪ್ರಜಾ ಪಕ್ಷದಿಂದ ಕಣಕ್ಕಿಳಿದು 82,080 ಮತಗಳನ್ನು ಪಡೆದು ಸೋಲು ಕಂಡರು.
Chintamani Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಜಿ. ಕೆ. ಕೃಷ್ಣಾರೆಡ್ಡಿ (ಜೆಡಿಎಸ್) | 87,753 | ಡಾ. ಎಂ. ಸಿ. ಸುಧಾಕರ್ (ಬಿಜೆಪಿ) | 82,080 |
| 2013 | ಜಿ. ಕೆ. ಕೃಷ್ಣಾರೆಡ್ಡಿ (ಜೆಡಿಎಸ್) | 68,950 | ಡಾ. ಎಂ. ಸಿ. ಸುಧಾಕರ್ (ಸ್ವತಂತ್ರ) | 67,254 |
| 2008 | ಡಾ. ಎಂ. ಸಿ. ಸುಧಾಕರ್ (ಕಾಂಗ್ರೆಸ್) | 58,103 | ಕೆ. ಎಂ. ಕೃಷ್ಣಾರೆಡ್ಡಿ (ಜೆಡಿಎಸ್) | 56,857 |
ಡಾ. ಎಂ. ಸಿ. ಸುಧಾಕರ್ ಈಗ ಕಾಂಗ್ರೆಸ್ ಸೇರಿದ್ದಾರೆ. ಈ ಬಾರಿಯ ಚುನಾವಣೆಗೆ ಅವರೇ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ. ಜಿ. ಕೆ. ಕೃಷ್ಣಾ ರೆಡ್ಡಿ ಮತ್ತು ಸುಧಾಕರ್ ಎದುರಾಳಿಗಳು. ಡಾ. ಎಂ. ಸಿ. ಸುಧಾಕರ್ ರಮೇಶ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಪಕ್ಷ ಸೇರಲು ಕೆ. ಎಚ್. ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಕಾಂಗ್ರೆಸ್‌ನ ಡಾ. ಎಂ. ಸಿ. ಸುಧಾಕರ್ ನಡುವೆ ರಾಜಕೀಯ ವೈರತ್ವ ಮೊದಲಿನಿಂದಲೂ ಇದೆ. ಈ ಬಾರಿ ಬಿಜೆಪಿಯಿಂದ ಡಾ. ಕೆ. ಸುಧಾಕರ್ ಬಾಮೈದ ಕೋನಪಲ್ಲಿ ಸತ್ಯನಾರಾಯಣ ರೆಡ್ಡಿ ಕಣಕ್ಕಿಳಿಸಲಿದ್ದಾರೆ ಎಂಬ ಸುದ್ದಿ ಇದೆ. ಸತ್ಯನಾರಾಯಣ್ ಮಹೇಶ್, ಅರುಣ್ ಬಾಬು, ಎಂ. ಆರ್. ಬಾಬು ಸಹ ಬಿಜೆಪಿ ಟಿಕೆಟ್ ಬಯಸಿದ್ದಾರೆ.
ಚಿಂತಾಮಣಿ ಕ್ಷೇತ್ರದ ಮತದಾರರು ಒಟ್ಟು 2,10,676. ಪುರುಷರು 1,05,482. ಮಹಿಳೆಯರು 1,05,113. ಇತರರು 40. ಎಸ್‌ಸಿ 53 ಸಾವಿರ, ಎಸ್‌ಟಿ 25 ಸಾವಿರ, ಒಕ್ಕಲಿಗರು 50 ಸಾವಿರ, 38 ಸಾವಿರ ಮುಸ್ಲಿಂ, ಇತರ ಸಮುದಾಯದ 55 ಸಾವಿರ ಮತಗಳಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications