ಯಡಿಯೂರಪ್ಪ ಸಿಎಂ ಆಗಲು ಉರುಳು ಸೇವೆ ಸಲ್ಲಿಸಿದ ಕೊಪ್ಪದ ಯುವಕ
ಚಿಕ್ಕಮಗಳೂರು, ಜುಲೈ 16: ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿ, ಯುವಕನೊಬ್ಬ ಉರುಳುಸೇವೆ ಮಾಡಿದ್ದಾರೆ. ರಂಭಾಪುರಿ ಪೀಠದ ಆವರಣದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದ ಸುನೀಲ್ ನುಡುವಾನೆ ಎಂಬುವವರು ಉರುಳು ಸೇವೆ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೇಹೊನ್ನೂರಿನಲ್ಲಿ ರಂಭಾಪುರಿ ಪೀಠ ಇದೆ.
ಇನ್ನೇನು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಉರುಳಿ ಹೋಯಿತು. ಬಿಜೆಪಿಯು ಅಧಿಕಾರಕ್ಕೆ ಏರಿ, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಬಿಟ್ಟರು ಎಂಬ ಸಂಭ್ರಮ ಆ ಪಕ್ಷದ ಕಾರ್ಯಕರ್ತರಲ್ಲಿ ಕಂಡುಬರುತ್ತಿದೆ.

ಇದೇ ವೇಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ದೇವಾಲಯಗಳಲ್ಲಿ ಪೂಜೆ- ಪುನಸ್ಕಾರಗಳು ನಡೆಯುತ್ತಿವೆ. ಈಚೆಗಷ್ಟೇ ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಅಂಥದ್ದೊಂದು ಪೂಜೆ ನಡೆದಿತ್ತು. ಅದೇ ರೀತಿ ರಾಜ್ಯದ ವಿವಿಧೆಡೆ ಕೂಡ ಪೂಜೆಗಳು ನಡೆದ ಬಗ್ಗೆ ಸುದ್ದಿ ಬರುತ್ತಿದೆ. ಅಂಥ ಸುದ್ದಿಗೆ ಇದೀಗ ಹೊಸ ಸೇರ್ಪಡೆ ಆಗಿದೆ.












Click it and Unblock the Notifications