ಕಾಫಿನಾಡಿನ ಯುವಕನ ಬಾಳಲ್ಲಿ ಎವರ್‌ಗ್ರೀನ್ ಆದ 2,000 ರೂಪಾಯಿ ನೋಟು
ಚಿಕ್ಕಮಗಳೂರು, ಮೇ 21: ಆರ್‌ಬಿಐ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವಿಕೆಗೆ ದೇಶದ ಜನರಿಗೆ ಗಡುವು ನೀಡಿದೆ. ಇನ್ನೇನು ಏಳೆಂಟು ತಿಂಗಳಲ್ಲಿ 2,000 ರೂಪಾಯಿ ನೋಟಿಗೆ ಕೊನೆ ಮೊಳೆ ಕೂಡ ಬೀಳಲಿದೆ. ಆದರೆ, ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೇ ವರ್ಷಗಳು ಕಳೆದರು ಆ 2,000 ರೂಪಾಯಿ ಮುಖಬೆಲೆಯ ನೋಟು ಹಚ್ಚಹಸಿರಾಗೇ ಇರಲಿದೆ.
ಕಳಸ ತಾಲೂಕಿನ ತೇಜು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್ಅನ್ನು 2,000 ರೂಪಾಯಿ ನೋಟಿನಲ್ಲೇ ಮುದ್ರಣ ಹಾಕಿಸಿದ್ದರು. ಆ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿದರೆ 2,000 ರೂಪಾಯಿ ನೋಟನ್ನು ನೋಡುವುದೇ ಬೇಡ ಅಷ್ಟು ಅಚ್ಚುಕಟ್ಟಾಗಿ ಮಾಡಿಸಿದ್ದರು.

ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2,000 ರೂಪಾಯಿ ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನು ಹಾಕಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದು ಮಾಡಿಸಿದ್ದರು.
ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನು ಆಶೀರ್ವಾದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು. ಅದನ್ನು ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು.
ಸುಮಾರು 1,500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದರು. ಇದೀಗ ಆರ್.ಬಿ.ಐ. 2,000 ನೋಟನ್ನು ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಆಮಂತ್ರಣ ಪತ್ರಿಕೆ ಕಳಿಸಿ ನೆನಪಿಸುತ್ತಿದ್ದಾರೆ. ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡ್ಅನ್ನು ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್‍ನವರು ಕೂಡ ವಾರಗಟ್ಟಲೇ ಟೈಂ ತೆಗೆದುಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಡಿಫರೆಂಟ್ ಆಗಿ ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ 2,000 ರೂಪಾಯಿ ನೋಟು ಎಂದೆಂದೂ ಹಚ್ಚಹಸಿರಾಗಿರಲಿದೆ.












Click it and Unblock the Notifications