ಚಿಕ್ಕಮಗಳೂರು; ಶ್ವೇತಾ ಹತ್ಯೆಗೆ ಟ್ವಿಸ್ಟ್, ಪೊಲೀಸರು ಹೇಳುವುದೇನು?
ಚಿಕ್ಕಮಗಳೂರು, ಡಿಸೆಂಬರ್ 13; ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಶ್ವೇತಾ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪತಿ ದರ್ಶನ್ ವಶಕ್ಕೆ ಪಡೆದು ಗೋಣಿಬೀಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಜಿಲ್ಲೆಯ ಕಳಸ ಪಟ್ಟಣದಲ್ಲಿ ಶ್ವೇತಾ ಅಂತ್ಯ ಸಂಸ್ಕಾರ ನಡೆದಿದೆ.
31 ವರ್ಷದ ಶ್ವೇತಾ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಮನೆಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದರು. ಈ ಸಾವಿನ ಕುರಿತು ಹಲವು ಅನುಮಾನ ವ್ಯಕ್ತವಾಗಿದೆ. ಆಕೆಯ ಪತಿ ದರ್ಶನ್ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ಮೃತ ಶ್ವೇತಾ ಹಾಗೂ ದರ್ಶನ್ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್. ಶಿವಮೊಗ್ಗ, ಬೆಂಗಳೂರಿನಲ್ಲಿ ಲ್ಯಾಬ್‌ಗಳಿವೆ. ದರ್ಶನ್ ಮತ್ತು ಶ್ವೇತಾ ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಒಂದು ಮಗುವೂ ಇದೆ. ದರ್ಶನ್ ಲ್ಯಾಬ್‌ನಲ್ಲಿ ಕೆಲಸ ಮಾಡುವ ಅಶ್ವಿನಿಯನ್ನು ಪ್ರೀತಿಸುತ್ತಿದ್ದರು. ಶ್ವೇತಾ ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ದೇಹದಲ್ಲಿ ವಿಷದ ಅಂಶ ಪತ್ತೆ; ಶ್ವೇತಾ ಮರಣೋತ್ತರ ಪರೀಕ್ಷೆಯ ವೇಳೆ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಆದರೆ ವಿಷದ ಇಂಜೆಕ್ಷನ್ ನೀಡಿಲ್ಲ. ರಾಗಿ ಮುದ್ದೆಯಲ್ಲಿ ಸೈನೈಡ್ ಬೆರೆಸಿ ತಿನ್ನಿಸಲಾಗಿದೆ ಎಂಬುದು ಸದ್ಯದ ಮಾಹಿತಿ. ಶ್ವೇತಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ದರ್ಶನ್ ಒಪ್ಪಿಕೊಂಡಿದ್ದಾರೆ.
ಹತ್ಯೆ ಮಾಡಿದ ಬಳಿಕ ಶ್ವೇತಾ ಕುಟುಂಬದವರಿಗೆ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾಳೆ ದರ್ಶನ್ ನಂಬಿಸಿದ್ದರು. ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಪ್ರಯತ್ನ ನಡೆಸಿದ್ದರು. ಕುಟುಂಬದವರು ಪಟ್ಟು ಹಿಡಿದು ಮರಣೋತ್ತರ ಪರೀಕ್ಷೆ ಮಾಡಿಸಿದ್ದರು. ಆಗ ಸತ್ಯ ಬೆಳಕಿಗೆ ಬಂದಿದೆ.
ಶ್ವೇತಾ ಮರಣೋತ್ತರ ಪರೀಕ್ಷೆಯಲ್ಲಿ ಹೃದಾಯಾಘಾತವಲ್ಲ ಎಂಬ ಮಾಹಿತಿ ಸಿಕ್ಕಿದೆ. ಮಂಗಳವಾರವೇ ದರ್ಶನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶ್ವೇತಾ ದರ್ಶನ್ ಪ್ರೇಯಸಿ ಅಶ್ವಿನಿ ಜೊತೆ ಮಾತನಾಡಿರುವ ಎರಡು ಆಡಿಯೋ ಸಹ ಸಿಕ್ಕಿದೆ. ನಮ್ಮ ಸಂಸಾರ ಹಾಳು ಮಾಡಬೇಡ ಎಂದು ಶ್ವೇತಾ ಬೇಡಿಕೊಂಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಶ್ವೇತಾಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಬೆಂಗಳೂರಿನಿಂದ ದೇವವೃಂದ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ರಾತ್ರಿ ಊಟದಲ್ಲಿ ಸೈನೈಡ್ ಹಾಕಿ ಹತ್ಯೆ ಮಾಡಿರುವ ಅನುಮಾನ ಇದ್ದು, ತನಿಖೆ ಮುಂದುವರೆದಿದೆ. ಕಳಸ ನಗರದಲ್ಲಿ ಶ್ವೇತಾ ಅಂತ್ಯ ಸಂಸ್ಕಾರ ನಡೆದಿದೆ. ಮಗು ತಾಯಿಯ ಶವಕ್ಕೆ ಪೂಜೆ ಮಾಡುವಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸರು ಹೇಳುವುದೇನು?; ಶ್ವೇತಾ ಹತ್ಯೆ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಮಾತನಾಡಿದ್ದು, "ದರ್ಶನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ಶ್ವೇತಾ ಹಾಗೂ ದರ್ಶನ್ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್. ಕೆಮಿಕಲ್ ತಿನ್ನಿಸಿ ಕೊಲೆ ಮಾಡಿರುವುದಾಗಿ ಕಂಡು ಬಂದಿದೆ. ಎಫ್.ಎಸ್.ಎಲ್ ತಂಡ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಸ್ಥಳ ಮಹಜರ್‌ನಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಕೊಲೆ ಎಂದು ಹೇಳುತ್ತಿವೆ. ಮರಣೋತ್ತರ ಪರೀಕ್ಷೆ, ಎಫ್.ಎಸ್.ಎಲ್. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ" ಎಂದರು.
ಬುಧವಾರ ಶ್ವೇತಾ ಮತ್ತು ದರ್ಶನ್ ಪ್ರೇಯಸಿ ಅಶ್ವಿನಿ ನಡುವಿನ ಮತ್ತೊಂದು ಆಡಿಯೋ ವೈರಲ್ ಆಗಿದೆ. ನನ್ನ ಗಂಡನ ಸಹವಾಸಕ್ಕೆ ಬರಬೇಡ ಎಂದು ಶ್ವೇತಾ ಹೇಳಿದ್ದಾಳೆ. ಶ್ವೇತಾ ಸಾವಿನ ಪ್ರಕರಣ ಬೆಳಕಿಗೆ ಬಂದ ಬಳಿಕ ಅಶ್ವಿನಿ ಪರಾರಿಯಾಗಿದ್ದಾಳೆ.
ಬೆಂಗಳೂರಿನ ಮಲ್ಲೇಶ್ವರ ನಿವಾಸಿ ಅಶ್ವಿನಿ ಬಂಧನ ಭೀತಿಯಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಶ್ವಿನಿ ಜೊತೆಗಿನ ಸಂಬಂಧವೇ ಶ್ವೇತಾಳನ್ನು ದರ್ಶನ್ ಹತ್ಯೆ ಮಾಡಲು ಕಾರಣವೇ? ಎಂದು ಇನ್ನೂ ತಿಳಿಯಬೇಕಿದೆ.












Click it and Unblock the Notifications